Ad Widget .

“ಬಂಟರು ನಾಯಕತ್ವ ಗುಣದಿಂದಲೇ ಸಮಾಜದಲ್ಲಿ ಗುರುತಿಸಲ್ಪಡುತ್ತಾರೆ”-ಒಡಿಯೂರು ಶ್ರೀ|ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಚೇರಿ ಮೂಲ್ಕಿಯಲ್ಲಿ ಉದ್ಘಾಟನೆ

ಸಮಗ್ರ ನ್ಯೂಸ್: ಜಾಗತಿಕ ಬಂಟರ ಸಂಘಗಳ ಒಕ್ಕೂಟ
ಇದರ ಆಡಳಿತ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ಮೂಲ್ಕಿಯ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ಜರುಗಿತು.

Ad Widget . Ad Widget .

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಆಶೀರ್ವಚನಗೈದು ಮಾತಾಡಿದ ಒಡಿಯೂರು ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು, “ಬಂಟರು ಸಂಘಟನೆಯಾದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದು. ವ್ಯಕ್ತಿ ಯಾವತ್ತೂ ಮೇಲಲ್ಲ ಸಂಘಟನೆ ಮೇಲು. ಸಂಘಟನೆ ಗಟ್ಟಿಯಾದಲ್ಲಿ ವ್ಯಕ್ತಿ ಮತ್ತು ಸಮಾಜ ಎರಡೂ ಬೆಳೆಯುತ್ತದೆ. ಬಂಟರು ಎಲ್ಲಾ ಕ್ಷೇತ್ರದಲ್ಲೂ ಇಂದು ಬೆಳೆಯುತ್ತಿದ್ದಾರೆ. ಸಂಪತ್ತು ಮಾತ್ರವಲ್ಲ ಒಳ್ಳೆಯ ಮನಸು ಕೂಡಾ ಬಂಟರಲ್ಲಿದೆ. ಇದು ಶ್ರೇಷ್ಠವಾದ ಗುಣ. ಅವರಲ್ಲಿ ನಾಯಕತ್ವ ಗುಣ ಇರುವ ಕಾರಣದಿಂದಲೇ ಸಮಾಜದಲ್ಲಿ ಅವರು ಗುರುತಿಸಲ್ಪಡುತ್ತಾರೆ. ಬಂಟರು ಸಂಘಿತರಾದರೆ ದೇಶವನ್ನು ಆಳಲು ಸಮರ್ಥರು” ಎಂದು ಹೇಳಿದರು.
ಬಳಿಕ ಮಾತಾಡಿದ ಶ್ರೀ ವಿದ್ಯಾ ಸಂಸ್ಥೆಯ ಸ್ಥಾಪಕಾಧ್ಯಕ್ಷ ಎ. ಸದಾನಂದ ಶೆಟ್ಟಿ ಅವರು ಮಾತನಾಡಿ, “ಬಂಟ ಸಮಾಜದಲ್ಲಿ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಾರು ಹೃದಯದಿಂದ ದಾನ ಮಾಡುತ್ತಾರೋ ಅವರು ಜೀವನದಲ್ಲಿ ಎಂದಿಗೂ ಸೋಲುವುದಿಲ್ಲ” ಎಂದರು.
ಬಳಿಕ ಮಾತಾಡಿದ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರು, “ಬಂಟರು ಪ್ರಪಂಚದ ಯಾವ ಮೂಲೆಗೆ ಹೋದರೂ, ಯಾವ ಉದ್ಯಮಕ್ಕೆ ಕೈಹಾಕಿದರೂ ಅವರು ಗೆಲ್ಲುತ್ತಾರೆ. ಇದಕ್ಕೆ ಅವರಲ್ಲಿನ ಸಾಹಸ ಗುಣಗಳೇ ಕಾರಣ. ನಮ್ಮಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚಿದೆ ಆದರೆ ದಾನಿಗಳ ಸಂಖ್ಯೆ ಕಡಿಮೆಯಿದೆ. ಇದರಿಂದ ಸಮಾಜದಲ್ಲಿ ಇನ್ನೂ ದುರ್ಬಲರು, ಬಡವರು ಇದ್ದಾರೆ. ಸಾಮೂಹಿಕವಾಗಿ ನಾವು ದಾನ ಧರ್ಮದಲ್ಲಿ ತೊಡಗಿಕೊಂಡು ಸಾಮಾಜಿಕ ಕಳಕಳಿ ಹೊಂದಿದಲ್ಲಿ ನಮ್ಮ ಇಡೀ ಸಮಾಜದ ಅಭಿವೃದ್ಧಿ ಕಷ್ಟಸಾಧ್ಯವೇನಲ್ಲ” ಎಂದರು.
ಒಕ್ಕೂಟದ ಮಹಾದಾನಿ ತೋನ್ಸೆ ಆನಂದ ಶೆಟ್ಟಿ ಮಾತನಾಡಿ, “ಮಕ್ಕಳಲ್ಲಿ ಬೆಳೆಯುತ್ತಲೇ ಸಂಸ್ಕೃತಿ ಹಾಗೂ ಬಂಟ ಸಮಾಜದ ಅನನ್ಯ ಪರಂಪರೆಯನ್ನು ಕಲಿಸುವ ಕೆಲಸ ನಮ್ಮಿಂದ ನಡೆಯಬೇಕು. ಇದರಿಂದ ಬಂಟ ಸಮಾಜ ಮುಂದೆಯೂ ಗೌರವಪೂರ್ಣವಾಗಿ ಬೆಳೆಯುತ್ತದೆ” ಎಂದು ಆಶಯ ವ್ಯಕ್ತಪಡಿಸಿದರು.
ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, “ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಮೂಲ್ಕಿಯಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ ನಿರ್ಮಾಣಗೊಳ್ಳಲಿದೆ. ಇದಕ್ಕೆ ಬಂಟ ಸಮಾಜದ ದಾನಿಗಳು ಮನಪೂರ್ವಕ ಧನಸಹಾಯ ಮಾಡುವ ಮೂಲಕ ಸಹಕರಿಸಬೇಕು. ಸಾಧನೆ ಮಾಡುವಾಗ ಯಾರೇನೇ ಅಂದರೂ ಯೋಚನೆ ಮಾಡಬಾರದು. ಸಮಾಜದ ಅಭಿವೃದ್ಧಿಗೆ ನಮ್ಮ ಜೀವನ ಮುಡಿಪಾಗಿಡಬೇಕು. ಬೇರೊಬ್ಬರ ಕಷ್ಟವನ್ನು ನಮ್ಮ ಕಷ್ಟ ಎಂದು ತಿಳಿದಾಗ ಬದುಕು ಸಾರ್ಥಕವಾಗುತ್ತದೆ. ಜಾತಿ, ಧರ್ಮಗಳ ನಡುವೆ ಬೇಧಭಾವ ತೋರದೆ ಎಲ್ಲರನ್ನೂ ನಮ್ಮವರೆಂದು ಕೊಂಡಾಗ ಜೀವನಕ್ಕೆ ಮೌಲ್ಯ ಬರುತ್ತದೆ” ಎಂದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ ಸನಾಜದ ಏಳಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದರು.
ವೇದಿಕೆಯಲ್ಲಿ ಮುಂಬೈ ಬಂಟರ ಸಂಘದ ಅಧ್ಯಕ್ಷ ಆರ್.ಕೆ. ಶೆಟ್ಟಿ, ರಾಜೇಶ್ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಸತೀಶ್ ಶೆಟ್ಟಿ ಪಟ್ಲ, ಶಶಿಧರ್ ಶೆಟ್ಟಿ ಇನ್ನಂಜೆ, ಒಕ್ಕೂಟದ ನಿರ್ದೇಶಕ ಮುಂಡ್ಕೂರು ರತ್ನಾಕರ್ ಶೆಟ್ಟಿ, ರವೀಂದ್ರನಾಥ್ ಭಂಡಾರಿ, ಬಾಬು ಶೆಟ್ಟಿ ಪೆರಾರ, ಚಂದ್ರಹಾಸ್ ಶೆಟ್ಟಿ, ನವೀನ್ ಚಂದ್ರ ಶೆಟ್ಟಿ, ಸುಧಾಕರ್ ಶೆಟ್ಟಿ, ಪಂಜುರ್ಲಿ ಗ್ರೂಪ್ ಮಾಲಕ ರಾಜೇಂದ್ರ ಶೆಟ್ಟಿ, ನಾಗೇಶ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

Ad Widget . Ad Widget .

ವೇದಿಕೆಯಲ್ಲಿ ಒಕ್ಕೂಟದ ಮಹಾನಿರ್ದೇಶಕ ಪ್ರವೀಣ್ ಭೋಜ ಶೆಟ್ಟಿ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಒಕ್ಕೂಟದ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮ ನಡೆಯಿತು. ವೈದ್ಯಕೀಯ ನೆರವು, ಮನೆ ರಿಪೇರಿ/ ಮನೆ ನಿರ್ಮಾಣ, ಹೆಣ್ಣುಮಕ್ಕಳ ಮದುವೆಗೆ ಆರ್ಥಿಕ. ಸಹಾಯವೂ ಸೇರಿದಂತೆ ಸುಮಾರು 20 ಲಕ್ಷ ರೂ. ಮೊತ್ತದ ಆರ್ಥಿಕ ಸಹಾಯವನ್ನು ಹಸ್ತಾಂತರಿಸಲಾಯಿತು.

ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ, ಪುರುಷೋತ್ತಮ್ ಭಂಡಾರಿ ಅಡ್ಯಾರ್, ಆರ್ ಜೆ ನಯನಾ ಶೆಟ್ಟಿ, ಪ್ರಿಯಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *