ಸಮಗ್ರ ನ್ಯೂಸ್: ಬಿಜೆಪಿಯಿಂದ ಚುನಾವಣಾ ಟಿಕೆಟ್ ಘೋಷಣೆ ಸಮೀಪದಲ್ಲಿರುವಾಗಲೇ ಮಾಜಿ ಸಚಿವ, ಹೆಬ್ಬಾಳ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡುರ ಖಾಸಗಿ ಫೋಟೋ ವೈರಲ್ ಆಗಿದೆ. ಇನ್ನೆರಡು ದಿನಗಳಲ್ಲಿ ಬಿಜೆಪಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡುರ ಫೋಟೋ ವೈರಲ್ ಆಗಿರುವುದು ಚರ್ಚೆಗೆ ಗ್ರಾಸವಾಗಿದೆ. ಮಾತ್ರವಲ್ಲ ಕಟ್ಟಾಗೆ ಟಿಕೆಟ್ ಕೈತಪ್ಪಿಸಲು ವಿರೋಧಿಗಳು ಖಾಸಗಿ ಫೋಟೋವನ್ನ ಹರಿಬಿಟ್ಟಿದ್ದಾರಾ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಶರ್ಟ್ ಇಲ್ಲದೇ ಮನೆಯಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕುಳಿತಿರುವ ಫೋಟೋ ಹರಿಬಿಡಲಾಗಿದ್ದು, ಅಶ್ಲೀಲ ಫೋಟೋ ಕೂಡ ಇದಾಗಿಲ್ಲ. ಒಟ್ಟಿನಲ್ಲಿ ರಾಜಕೀಯ ದುರುದ್ದೇಶದಿಂದ ಟಿಕೆಟ್ ಕೈ ತಪ್ಪಿಸಲು ಈ ರೀತಿ ಮಾಡಲಾಗಿದೆ ಎಂದು ಕಟ್ಟಾ ಬೆಂಬಲಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ವೈರಲ್ ಫೋಟೋ ಕುರಿತು ಮಾತನಾಡಿದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ‘ಇದು ನನ್ನದೇ ಫೋಟೋ, ಆದರೆ ಅನಾರೋಗ್ಯದ ಕಾರಣಗಳಿಂದ ಕೆಲ ವರ್ಷಗಳಿಂದ ಫಿಸಿಯೋ ಥೆರಪಿ ಮಾಡಿಸುತ್ತಿದ್ದೇನೆ. ಆ ಸಂದರ್ಭದಲ್ಲಿನ ನನ್ನ ವೈಯಕ್ತಿಕವಾದ ಫೋಟೋ. ನನ್ನ ಮನೆಯೊಳಗೆ ನಾನು ಹಾಗೆ ಇದ್ದೇನೆ, ಆದರೆ ರಾಜಕೀಯ ವಿರೋಧಿಗಳು ಇದನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ವಿರೋಧಿಗಳು ಎಂದರೆ ಬೇರೆ ಯಾರೂ ಅಲ್ಲ ಕಾಂಗ್ರೆಸ್‌ನವರ ಕೈವಾಡ ಇದೆ’ ಎಂದು ಆರೋಪಿಸಿದ್ದಾರೆ.
“ಆ ರೀತಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಸಹಜವಾಗಿ ಪ್ರತಿ ಮನೆಯಲ್ಲಿ ಇರುವಂತೆ ಇದ್ದೇವೆ. ನಮ್ಮ ಕಾನೂನು ಸಲಹೆಗಾರರ ಜೊತೆ ಮಾತನಾಡುತ್ತೇನೆ. ನಂತರ ಅವರು ಹೇಳಿದಂತೆ ಕಾನೂನು ರೀತಿಯಲ್ಲಿ ಮುಂದುವರಿಯುತ್ತೇನೆ. ನೇರವಾಗಿ ನನ್ನನ್ನ ಎದುರಿಸಲು ಸಾಧ್ಯವಾಗದ ಕಾಂಗ್ರೆಸ್ ನಾಯಕರು ಈ ರೀತಿ ಮಾಡಿದ್ದಾರೆ. ಕಾರ್ಯಕರ್ತರು ಯಾರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಚುನಾವಣೆಗೆ ಸಿದ್ಧರಾಗಿ’ ಎಂದು ಬೆಂಬಲಿಗರಿಗೆ ಕರೆ ನೀಡಿದ್ದಾರೆ. ಅಲ್ಲದೇ ಕಾನೂನು ತಜ್ಞರ ಸಲಹೆ ಪಡೆದಿರುವ ಕಟ್ಟಾ, ಸದಾಶಿವನಗರ ಠಾಣೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಿದ್ದೇನೆ” ಎಂದು ತಿಳಿಸಿದ್ದಾರೆ.