ಮಂಗಳೂರು; ನಕಲಿ ವೀಲುನಾಮೆಯನ್ನು ಸಿದ್ಧಪಡಿಸಿ, ನಕಲಿ ಅಫಿದವಿತ್ ಮಾಡಿ, ಆರ್‌ಟಿಎಸ್‌ಆರ್೨೩೯/೨೨ರಂತೆ ತಮ್ಮ ಮಕ್ಕಳ ಹೆಸರಿಗೆ ಆರ್.ಟಿ.ಸಿ. ಆದೇಶ ಮಾಡಿಕೊಂಡು ಪೋರ್ಜರಿ ಮಾಡಿದ ಆರೋಪದ ಹಿನ್ನಲೆ ಅಜಿತ್ ಕುಮಾರ್ ರೈ ಮಾಲಾಡಿ ಸಹಿತ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣದ ಸಾರಾಂಶ; ಗೀತಾ ಟಿ ಪೂಂಜಾ ಮತ್ತು ಡಾ. ತಿಮ್ಮಪ್ಪ ಪೂಂಜಾರಿಗೆ ಮಕ್ಕಳಿಲ್ಲದ ಕಾರಣ ತನ್ನ ಸಂಬಂಧದ ರಾಜೇಶ್ ಕುಮಾರ್ ಶೆಟ್ಟಿ ಅವರನ್ನು ಸ್ವಂತ ಮಗನಂತೆ ನೋಡಿಕೊಂಡಿದ್ದರು. ರಾಜೇಶ್ ಕುಮಾರ್ ಶೆಟ್ಟಿ ಕೂಡಾ ಇವರಿಬ್ಬರನ್ನು ಸ್ವಂತ ತಂದೆ ತಾಯಿಯಂತೆ ನೋಡಿಕೊಂಡು ಒಬ್ಬ ಮಗನಾಗಿ ಏನೆಲ್ಲಾ ಕರ್ತವ್ಯವನ್ನು ಮಾಡಬೇಕೋ ಅದನ್ನೆಲ್ಲಾ ಮಾಡಿಕೊಂಡು ಬಂದಿದ್ದರು. ಗೀತಾ ಟಿ. ಪೂಂಜಾ ೦೩-೦೨-೨೦೨೨ರಂದು ಅವರು ಮರಣ ಹೊಂದಿದ ನಂತರ. ಇದರಿಂದ ತೀವ್ರವಾಗಿ ನೊಂದುಕೊಂಡ ಡಾ. ತಿಮ್ಮಪ್ಪ ಪೂಂಜಾ ಅವರು ತನ್ನ ಪುತ್ರ ಸಮಾನ ರಾಜೇಶ್ ಕುಮಾರ್ ಶೆಟ್ಟಿಯ ಮುತುವರ್ಜಿಯಿಂದ ನೆಮ್ಮದಿಯಿಂದ ಬದುಕಿದ್ದರು. ಗೀತಾ ಟಿ. ಪೂಂಜಾ ಕಾಲವಾದ ನಂತರ ತಂದೆ ತಾಯಿಯಿಂದ ಬಳುವಳಿಯಾಗಿ ಬಂದಿದ್ದ ಆಸ್ತಿ ಗಂಡನಾದ ಡಾ. ತಿಮ್ಮಪ್ಪ ಪೂಂಜಾರ ಸುಪರ್ದಿಗೆ ಬಂದಿತ್ತು. ಆದರೆ ಇದಾದ ಕೆಲವು ತಿಂಗಳುಗಳ ಅಂತರದಲ್ಲಿ ಡಾ.ತಿಮ್ಮಪ್ಪ ಪೂಂಜಾ ೦೫-೧೧-೨೦೨೨ರಂದು ಮೃತಪಟ್ಟರು. ತನ್ನ ಮರಣಕ್ಕಿಂತ ಮುಂಚೆ ಅಂದರೆ ೧೬-೦೫-೨೦೨೨ರಂದು ಡಾ. ತಿಮ್ಮಪ್ಪ ಪೂಂಜಾ ತನಗೆ ಮಕ್ಕಳಿಲ್ಲದ ಕಾರಣ ತನ್ನನ್ನು ನೋಡಿಕೊಂಡಿದ್ದ ರಾಜೇಶ್ ಕುಮಾರ್ ಶೆಟ್ಟಿಗೆ ತನ್ನೆಲ್ಲಾ ಚರ ಹಾಗೂ ಸ್ಥಿರ ಸೇರಿ ಆಸ್ತಿಯ ಸಂಪೂರ್ಣ ಹಕ್ಕನ್ನು ಮಂಗಳೂರಿನ ಸಬ್‌ರಿಜಿಸ್ಟ್ರಾರ್ ಕಚೇರಿಗೆ ಖುದ್ದಾಗಿ ಹಾಜರಾಗಿ ವೀಲುನಾಮೆ ಬರೆದು ಕೊಟ್ಟಿದ್ದರು. ವೀಲುನಾಮೆ ಪ್ರಕಾರ ಕಾನೂನಾತ್ಮಕವಾಗಿ ಬಂದಿದ್ದ ಆಸ್ತಿಯನ್ನು ಅನುಭವಿಸಬೇಕಿದ್ದ ರಾಜೇಶ್ ಕುಮಾರ್ ಶೆಟ್ಟಿ ನಂತರ ಗಂಡಾಂತರಕ್ಕೆ ಸಿಲುಕಬೇಕಾಯಿತು. ಯಾಕೆಂದರೆ ಮಕ್ಕಳಿಲ್ಲದ ದಂಪತಿಗೆ ರಾಜೇಶ್ ಕುಮಾರ್ ಶೆಟ್ಟಿ ಎಂಬ ಮಗನೇ ಅಲ್ಲದ ವ್ಯಕ್ತಿಗೆ ಆಸ್ತಿ ಹೋಗಬಾರದು, ಎಲ್ಲಾ ಆಸ್ತಿ ತಮ್ಮಲ್ಲೇ ಉಳಿದುಕೊಳ್ಳಬೇಕೆಂಬ ದುರಾಸೆಗೆ ಬಿದ್ದ ಆರೋಪಿಗಳು ನಕಲಿ ವೀಲುನಾಮೆಯನ್ನು ಸಿದ್ಧಪಡಿಸಿ, ನಕಲಿ ಅಫಿದವಿತ್ ಮಾಡಿ, ಆರ್‌ಟಿಎಸ್‌ಆರ್೨೩೯/೨೨ರಂತೆ ತಮ್ಮ ಮಕ್ಕಳ ಹೆಸರಿಗೆ ಆರ್.ಟಿ.ಸಿ. ಆದೇಶ ಮಾಡಿಕೊಂಡು ಪೋರ್ಜರಿ ಮಾಡಿದ್ದಾರೆ.
೦೪-೦೯-೨೦೨೨ರಂದು ಕೊನೆಯ ವೀಲುನಾಮೆಯೆಂದು ಹೇಳಿ ತಿಮ್ಮಪ್ಪ ಪೂಂಜಾ ಮರಣದ ನಂತರ ಸುಳ್ಳು ದಾಖಲೆ ಸೃಷ್ಟಿಸಿ ನಕಲಿ ಸಹಿಗಳನ್ನು ಮಾಡಿ ರಾಜೇಶ್ ಕುಮಾರ್ ಶೆಟ್ಟಿಗೆ ಅನ್ಯಾಯ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಕ್ರಮವಾಗಿ ಹಣ ಗಳಿಸುವ ದುರಾಸೆಯಿಂದ ಕಾನೂನಿನ ಕಣ್ಣಿಗೆ ಮಣ್ಣೆರಚಿ ನಕಲಿ ವೀಲುನಾಮೆಯನ್ನು ದುರ್ಬಳಕೆ ಮಾಡಿಕೊಂಡು ಕೆಲವೊಂದು ಆಸ್ತಿಗಳ ದಾಖಲೆಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿರುವ ಹಿನ್ನಲೆಯಲ್ಲಿ ಎಂಟು ಮಂದಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜೇಶ್ ಕುಮಾರ್ ಶೆಟ್ಟಿ ದೂರು ನೀಡಿದ್ದಾರೆ.
ಪ್ರಕರಣದ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದವರು.. ಪ್ರಕರಣದ ಆರೋಪಿಗಳೆಂದರೆ ಮಂಗಳೂರಿನ ಬಂಗ್ಲಕೂಳೂರು ದಿವ್ಯದರ್ಶನ ಹೌಸ್ ನಿವಾಸಿಗಳಾದ ವೀಣಾ ರೈ ಹಾಗೂ ಕೋಟಿ ಪ್ರಕಾಶ್ ರೈ ಪುತ್ರ ದರ್ಶನ್ ರೈ, ಬಂಗ್ರಕೂಳೂರು ಪ್ರಕೃತಿ ಮಾಲಾಡಿ ಎಸ್ಟೇಟ್ ನಿವಾಸಿ ಆಶಾಜ್ಯೋತಿ ರೈ ಹಾಗೂ ಅಜಿತ್ ಕುಮಾರ್ ರೈ ಮಾಲಾಡಿ, ಬಿಜೈ ಕರಂಗಲಪಾಡಿ, ಪಿಂಟೋಸ್‌ಲೇನ್‌ನ ಹರಿಭಕ್ತಿ ಅಪಾರ್ಟ್‌ಮೆಂಟ್ ನಿವಾಸಿ ಕರುಣಾಕರ ಶೆಟ್ಟಿ, ಕೊಟ್ಟಾರಚೌಕಿ ಜೆ.ಬಿ. ಲೋಬೋ ರೋಡ್, ಫಸ್ಟ್ ಕ್ರಾಸ್ ನಿವಾಸಿ ರಮಾನಾಥ ಶೆಟ್ಟಿ, ಆಕಾಶಭವನ ಆನಂದನಗರ ನಿವಾಸಿ ಕಮಲಾಕ್ಷ ಹಾಗೂ ಮಂಗಳೂರಿನ ಕೆ.ಎಸ್. ರಾವ್ ರೋಡ್ ಯುಟಿಲಿಟಿ ಟವರ್ ನಿವಾಸಿ ಮಿತ್ರಾಬಾಯಿ ಎಂದು ಗುರುತಿಸಲಾಗಿದೆ.