Samagra news: ಕೊಟ್ಟಿಗೆಹಾರ ಚೆಕ್‌ಪೋಸ್ಟ್ನಲ್ಲಿ ಚುನಾವಣೆ ಹಿನ್ನಲೆಯಲ್ಲಿ ನಡೆಯುತ್ತಿದ್ದ ವಾಹನ ತಪಾಸಣೆ ವೇಳೆ ದಾಖಲೆಗಳಿಲ್ಲದೇ ಸಿಕ್ಕ ಹಣವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ.
ಮಂಗಳೂರು ಕಡೆಯಿಂದ ಕೊಟ್ಟಿಗೆಹಾರದ ಕಡೆಗೆ ಬರುತ್ತಿದ್ದ ರಾಮನಗರ ಮೂಲದ ಕಾರನ್ನು ಪರಿಶೀಲಿಸುವ ವೇಳೆ ಕಾರಿನ ಮುಂದಿನ ಡ್ಯಾಶ್ ಬೋರ್ಡ್ನಲ್ಲಿ ದಾಖಲೆಗಳಿಲ್ಲದ ೧ ಲಕ್ಷ ರೂ ಪತ್ತೆಯಾಗಿದೆ. ಈ ಹಣದ ಬಗ್ಗೆ ಯಾವುದೇ ದಾಖಲೆಗಳು ಇಲ್ಲದ ಹಿನ್ನಲೆಯಲ್ಲಿ ಪೊಲೀಸರು ವಾಹನ ಮತ್ತು ಹಣವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳಕ್ಕೆ ವೃತ್ತ ನಿರೀಕ್ಷಕ ಸೋಮೆಗೌಡ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಕಾರ್ಯಾಚರಣೆಯಲ್ಲಿ ಎಸ್‌ಎಸ್‌ಡಿ ತನಿಖಾಧಿಕಾರಿ ಮಂಜುನಾಥ್, ಬಣಕಲ್ ಠಾಣಾ ಪಿಎಸ್‌ಐ ಜಂಬೂರಾಜ್ ಮಹಾಜನ್, ಎಎಸ್‌ಐ ಶಶಿ, ಧಫೇದಾರ್ ಜಾಫರ್ ಷರೀಪ್, ಸಿಬ್ಬಂದಿ ಜಗದೀಶ್, ಗಿರೀಶ್, ಸಂತೋಷ್, ಮಾಲತೇಶ್, ಸಚ್ಚಿನ್, ಬಣಕಲ್ ಗ್ರಾ.ಪಂ ಕಾರ್ಯದರ್ಶಿ ನಾಣಯ್ಯ ಇದ್ದರು.
ರಾಮನಗರದ ೭ ಮಂದಿ ಕಾರಿನಲ್ಲಿ ಧರ್ಮಸ್ಥಳದಿಂದ ಹಿಂದಿರುಗುತ್ತಿದ್ದ ವೇಳೆ ಕೊಟ್ಟಿಗೆಹಾರದಲ್ಲಿ ವಾಹನ ತಪಾಸಣೆ ನಡೆಸಿದ್ದರು. ಪ್ರವಾಸಕ್ಕೆಂದು ಬಂದವರು ಪ್ರವಾಸಕ್ಕೆ ವೆಚ್ಚವಾಗುವ ಹಣವನ್ನು ಒಂದೆಡೆ ಇಟ್ಟುಕೊಂಡಿದ್ದೆವು. ಹಣ ಮತ್ತು ವಾಹನ ವಶಪಡಿಸಿಕೊಂಡಿರುವುದು ಯಾತ್ರಾಸ್ಥಳಕ್ಕೆ ಬಂದಿದ್ದ ನಮಗೆ ತೊಂದರೆ ಅನುಭವಿಸುವಂತಾಗಿದೆ. ಚುನಾವಣೆ ಉದ್ದೇಶಕ್ಕೆ ಹಣ ಸಾಗಿಸುವವರ ವಿರುದ್ದ ಪೊಲೀಸರು ಕ್ರಮ ಕೈಗೊಳ್ಳಲ್ಲಿ. ಆದರೆ ಯಾತ್ರಾಸ್ಥಳಕ್ಕೆ ಬರುವ ಪ್ರವಾಸಿಗರು ಪ್ರವಾಸ ಖರ್ಚಿಗೆ ಹಣ ಇಟ್ಟುಕೊಂಡು ಬಂದಿರುತ್ತಾರೆ. ಇದನ್ನು ವಶ ಪಡಿಸಿಕೊಂಡಿರುವುದು ಬೇಸರ ಉಂಟು ಮಾಡಿದೆ ಎಂದು ರಾಮನಗರದ ಪ್ರವಾಸಿಗರು ಪತ್ರಿಕಗೆ ತಿಳಿಸಿದ್ದಾರೆ.
ಚಿತ್ರೀಕರಣ ಇಲ್ಲದೇ ವಾಹನ ತಪಾಸಣೆ:
ನೀತಿಸಂಹಿತೆ ಜಾರಿಯಾದ ನಂತರ ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ವೀಡಿಯೋ ಚಿತ್ರೀಕರಣ ಮಾಡಬೇಕೆಂಬ ನಿಯಮವಿದ್ದರೂ ಕೊಟ್ಟಿಗೆಹಾರ ಚೆಕ್‌ಪೋಸ್ಟ್ನಲ್ಲಿ ವೀಡಿಯೋ ಚಿತ್ರೀಕರಣ ಮಾಡಲಾಗುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸುದೀರ್ ಕಡಿದಾಳು ಆರೋಪಿಸಿದ್ದಾರೆ.
ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾರದರ್ಶಕವಾಗಿ ತಪಾಸಣೆ ನಡೆಸಲು ಚೆಕ್‌ಪೋಸ್ಟ್ನಲ್ಲಿ ವಾಹನ ತಪಾಸಣೆ ಮಾಡುವಾಗ ವೀಡಿಯೋ ಚಿತ್ರೀಕರಣ ಮಾಡಬೇಕು ಎಂಬ ನಿಯಮವಿದ್ದರೂ ಕೂಡ ನಿಯಮವನ್ನು ಗಾಳಿಗೆ ತೂರಿ ವಾಹನ ತಪಾಸಣೆ ಮಾಡಲಾಗುತ್ತಿದೆ. ಗುರುವಾರ ಧರ್ಮಸ್ಥಳದಿಂದ ಹಿಂದಿರುಗುತ್ತಿದ್ದ ಭಕ್ತಾಧಿಗಳ ವಾಹನವನ್ನು ಮತ್ತು ಹಣವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ.