Samagra news: ಪ್ರಧಾನಿ ನರೇಂದ್ರ ಮೋದಿ ಅವರ ಸ್ನಾತಕೋತ್ತರ ಪದವಿಗೆ ಸಂಬಂಧಿಸಿದಂತೆ ಕೇಂದ್ರ ಮಾಹಿತಿ ಆಯೋಗದ ಆದೇಶವನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ದಂಡವನ್ನೂ ವಿಧಿಸಿದೆ.
ಪ್ರಧಾನಿ ಮೋದಿ ಅವರ ಎಂಎ ಪದವಿಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆ ಅಡಿ ವಿವರ ಒದಗಿಸಲು ಗುಜರಾತ್ ವಿಶ್ವವಿದ್ಯಾಲಯಕ್ಕೆ 2016ರಲ್ಲಿ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ನಿರ್ದೇಶನ ನೀಡಿತ್ತು. ಪ್ರಧಾನಿ ಅವರ ಪದವಿ ವಿವರವನ್ನು ಒದಗಿಸಲು ಆದೇಶಿಸುವಂತೆ ದಿಲ್ಲಿ ಸಿಎಂ ಹಾಗೂ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಸಿಐಸಿಗೆ ಅರ್ಜಿ ಸಲ್ಲಿಸಿದ್ದರು.
ಈಗ ಕೇಜ್ರಿವಾಲ್ ಅವರಿಗೆ 25 ಸಾವಿರ ರೂ ದಂಡ ವಿಧಿಸಿರುವ ಗುಜರಾತ್ ಹೈಕೋರ್ಟ್, ಅದನ್ನು ನಾಲ್ಕು ವಾರಗಳ ಒಳಗೆ ಗುಜರಾತ್ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಲ್ಲಿ ಠೇವಣಿ ಇರಿಸಬೇಕು ಎಂದು ಸೂಚನೆ ನೀಡಿದೆ. ಈ ತೀರ್ಪಿಗೆ ತಡೆ ನೀಡಲು ಕೂಡ ನ್ಯಾಯಮೂರ್ತಿ ಬೈರನ್ ವೈಷ್ಣವ್ ಅವರ ಪೀಠ ನಿರಾಕರಿಸಿದೆ.
ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಪ್ರಧಾನಿ ಮೋದಿ ಅವರ ಸ್ನಾತಕೋತ್ತರ ಪದವಿಯ ವಿವರಗಳನ್ನು ನೀಡುವಂತೆ 2016ರಲ್ಲಿ ಗುಜರಾತ್ ವಿಶ್ವವಿದ್ಯಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಸೂಚನೆ ನೀಡಿತ್ತು.