ಸಮಗ್ರ ನ್ಯೂಸ್: ಅಧಿಕ ಲಾಭ ನೀಡುವುದಾಗಿ ಹಣ ಪಡೆದು ವಂಚಿಸಿರುವ ಬಗ್ಗೆ ಸುರತ್ಕಲ್ ಎನ್‌ಐಟಿಕೆ ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿ ಯಶ್‌ವರ್ಧನ್ ಜೈನ್ ಆರೋಪಿ.
2022ರ ಮಾರ್ಚ್‌ನಿಂದ ವಾಟ್ಸಪ್ ಗ್ರೂಪ್‌ನಲ್ಲಿ ಎನ್‌ಐಟಿಕೆ ವಿದ್ಯಾರ್ಥಿಗಳಿಗೆ ಒಂದು ವಾರದಲ್ಲಿ ಶೇ.10ರಷ್ಟು ಅಧಿಕ ಲಾಭ ನೀಡುವುದಾಗಿ ಭರವಸೆ ನೀಡಿ ಹಣ ಪಡೆದಿದ್ದ.
ಅಕ್ಟೋಬರ್ ತಿಂಗಳಿನಲ್ಲಿ ‘ವೈವಿಜೆ ಇನ್‌ವೆಸ್‌ಟ್‌ಮೆಂಟ್ ಎಂಟರ್‌ಪ್ರೈಸಸ್ ಎಂಬ ಹೆಸರಿನ ಟೆಲಿಗ್ರಾಂ ಗ್ರೂಪ್ ಮಾಡಿದ್ದ. ಆ ಗ್ರೂಪ್ ಪ್ರಸ್ತುತ 981 ಮಂದಿ ಸದಸ್ಯರನ್ನು ಹೊಂದಿದೆ. ಅದರಲ್ಲಿ ಹೆಚ್ಚಾಗಿ ಎನ್‌ಐಟಿಕೆ ವಿದ್ಯಾರ್ಥಿಗಳು ಹಾಗೂ ಇತರ ಕೆಲವು ಕಾಲೇಜಿನ ವಿದ್ಯಾರ್ಥಿಗಳಿದ್ದಾರೆ.
ಎನ್‌ಐಟಿಕೆಯ ವಿದ್ಯಾರ್ಥಿಗಳು 20220 ಜೂ.26ರಿಂದ 2023ರ ಜ.3ರವರೆಗೆ ಹಂತ ಹಂತವಾಗಿ 27.96 ಲ.ರೂ.ಗಳನ್ನು ಆರೋಪಿ ಯಶ್‌ವರ್ಧನ್ ಜೈನ್‌ನ ಖಾತೆಗೆ ಪಾವತಿಸಿದ್ದಾರೆ. ಆರಂಭದಲ್ಲಿ ಅವರ ವಿಶ್ವಾಸಗಳಿಸಲು ಆರೋಪಿ 1 ತಿಂಗಳ ಕಾಲ ಹೂಡಿಕೆ ಮೇಲೆ ಲಾಭಾಂಶ ನೀಡಿದ್ದ. ಅನಂತರ ಯಾವುದೇ ಹಣ ನೀಡಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಮಂಗಳೂರಿನ ಸನ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.