ಸಮಗ್ರ ನ್ಯೂಸ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂಜತ್ತಬೈಲ್ ವಾರ್ಡ್ ನಂ.15ರ ಸಮಗ್ರ ಅಭಿವೃದ್ಧಿಗಾಗಿ 19.5 ಕೋಟಿ ಅನುದಾನ ಒದಗಿಸಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ಸೋಮವಾರ ಸಂಜೆ ಕಾವೂರಿನ ಸಹಕಾರಿ ಸೌಧ ಮುಂಭಾಗದಲ್ಲಿ ಜರುಗಿತು.
ಪ್ರಾಸ್ತಾವಿಕ ಮಾತನ್ನಾಡಿದ ಸುಮಂಗಲ ರಾವ್ ಅವರು, “ಶಾಸಕ ಭರತ್ ಶೆಟ್ಟಿ ಅವರ ಅವಧಿಯಲ್ಲಿ ಕುಂಜತ್ತಬೈಲ್ ದಕ್ಷಿಣ ವಾರ್ಡ್ ಸಂಪೂರ್ಣ ಅಭಿವೃದ್ಧಿಯಾಗಿದೆ.
ಕಾರ್ಪೋರೇಟರ್ ಆದ ಬಳಿಕ ಯಾವ ಕೆಲಸ ಮಾಡಬೇಕು, ಯಾವ ಕೆಲಸ ಬೇಗನೆ ಮುಗಿಯಬೇಕು ಎಂಬ ಬಗ್ಗೆ ಶಾಸಕರು ಕಾಲಕಾಲಕ್ಕೆ ನಮ್ಮನ್ನು ಎಚ್ಚರಿಸಿ ಸಹಕರಿಸಿದ್ದಾರೆ. ಇದರ ಫಲವಾಗಿ ಇಂದು ವಾರ್ಡ್ ನ ಎಲ್ಲ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆದಿವೆ. ಸುಮಾರು 2000 ಕೋಟಿ ರೂ. ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಿರುವ ಶಾಸಕರಿಗೆ ನಮ್ಮೆಲ್ಲರ ಪರವಾಗಿ ಅಭಿನಂದನೆಗಳು” ಎಂದರು.
ಬಳಿಕ ಮಾತಾಡಿದ ಡಾ. ಭರತ್ ಶೆಟ್ಟಿ ಅವರು, “ನನ್ನನ್ನು ಕೆಲವರು ಕಟ್ಟರ್ ಹಿಂದುತ್ವವಾದಿ ಎನ್ನುತ್ತಾರೆ. ಆದರೆ ನನ್ನ ಪ್ರಕಾರ ಭಾರತ ದೇಶದಲ್ಲಿ ಹುಟ್ಟಿರುವ ಯಾರೇ ಆಗಿರಲಿ. ಅವರು ಯಾವ ಧರ್ಮ, ಜಾತಿಗೆ ಸೇರಿದ್ದರೂ, ರಾಷ್ಟ್ರದ ಮೇಲೆ ಪ್ರೀತಿ ಹೊಂದಿರುವ ಎಲ್ಲರೂ ಹಿಂದೂಗಳೇ. ಅಧಿಕಾರದ ಐದು ವರ್ಷಗಳಲ್ಲಿ ಒಂದು ವರ್ಷ ನೆರೆ ಸಮಸ್ಯೆ, ಎರಡು ವರ್ಷಗಳ ಕಾಲ ಕೋವಿಡ್ ನಿಂದಾಗಿ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಸಿಕ್ಕಿರೋ ಒಂದು ವರ್ಷ ಅವಧಿಯಲ್ಲಿ 2000 ಕೋಟಿ ರೂ. ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ” ಎಂದರು.
“ಕಾವೂರು ಕೆರೆಯನ್ನು ಸ್ಮಾರ್ಟ್ ಸಿಟಿ ಅನುದಾನ ಬಳಸಿ ಮೇಲ್ದರ್ಜೆಗೆ ಏರಿಸಲಾಗಿದೆ. ಅದೀಗ ಜನರ ವಿಹಾರಕ್ಕೆ ನೆಚ್ಚಿನ ತಾಣವಾಗಿದೆ. ಅದೇ ರೀತಿ ಪಣಂಬೂರು ಬೀಚ್, ತಣ್ಣೀರುಬಾವಿ ಬಳಿಯ ನಾಯರ್ ಕುದ್ರು ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ 6500 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಇದು ನನ್ನ ಅಧಿಕಾರದ ಅವಧಿಯಲ್ಲಿನ ಅತ್ಯಂತ ಸಂತಸದ ಕ್ಷಣವಾಗಿದೆ” ಎಂದು ಹೇಳಿದರು.
ವೇದಿಕೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರ ಶಾಸಕ ಡಾ. ಭರತ್ ಶೆಟ್ಟಿ ವೈ., ಜಿಲ್ಲಾ ಮಾಧ್ಯಮ ಪ್ರಮುಖ್ ರಣ್ ದೀಪ್ ಕಾಂಚನ್, ಕಾರ್ಪೋರೇಟರ್ ಸುಮಂಗಲ, ಸಾಕ್ಷಾತ್ ಶೆಟ್ಟಿ, ಸುಜಿತ್ ಕುಲಾಲ್, ಅಲ್ಪಸಂಖ್ಯಾತ ಮೋರ್ಚಾ ಶಾನವಾಜ್, ಕಾರ್ಪೋರೇಟರ್ ಕಿರಣ್ ಕೋಡಿಕಲ್, ಶ್ವೇತಾ ಪೂಜಾರಿ, ರಾಜೇಶ್ ಕೊಟ್ಟಾರಿ, ಸಂದೀಪ್ ಪಚ್ಚನಾಡಿ ಉಪಸ್ಥಿತರಿದ್ದರು.