ಸಮಗ್ರ ನ್ಯೂಸ್ : ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ರದ್ದು ಮಾಡಿದ ನಿರ್ಣಯವನ್ನು ಖಂಡಿಸಿ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಎಸ್ ಡಿ ಪಿ ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಮಾ.28ರಂದು ಪುತ್ತೂರು ಕಿಲ್ಲೆ ಮೈದಾನದ ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ಪ್ರತಿಭಟನೆ ನಡೆಯಿತು.
ಮುಸ್ಲಿಂಮರಿಗೆ ಪ್ರವರ್ಗ 2ಬಿ ಅಡಿಯಲ್ಲಿದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದು ಮಾಡಿರುವುದು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡಿರುವ ಉದ್ದೇಶಿತ ದಾಳಿಯಾಗಿದೆ. ಇದು ಸರ್ಕಾರದ ಅಸಂವಿಧಾನಿಕ ತೀರ್ಮಾನವಾಗಿದೆ. ಮುಸ್ಲಿಮರ ವಿರುದ್ಧ ಸರ್ಕಾರ ನಡೆಸುವ ಷಡ್ಯಂತ್ರ ಇದಾಗಿದ್ದು, ಬಿಜೆಪಿ ತನ್ನ ಕೋಮುವಾದಿತನವನ್ನು ಪದೇ ಪದೇ ಪ್ರದರ್ಶಿಸುತ್ತಲೇ ಇದೆ. ಬರುವ ಚುನಾವಣೆಯಲ್ಲಿ ಇದರ ಪರಿಣಾಮ ಬಿಜೆಪಿ ಎದುರಿಸಬೇಕಾದಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಮಜೀದ್ ಖಾನ್ ಅವರು ಮಾತನಾಡಿ ವಿವಿಧ ಆಯೋಗ ಕೂಡ ಮುಸ್ಲಿಂಮರನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿರುವುದನ್ನು ನಾವು ಕಾಣಬಹುದು. ವಾಸ್ತವಾಂಶ ಹೀಗಿದ್ದರೂ ಸಹ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ತಡೆಯೊಡ್ಡುವ ಹಾಗೂ ಮುಖ್ಯವಾಹಿನಿಗೆ ಬರದಂತೆ ನೋಡಿಕೊಳ್ಳುವ ಕುತಂತ್ರ ಮುಂದುವರಿದ ಭಾಗವಾಗಿ 2ಬಿ ಮೀಸಲಾತಿ ರದ್ದುಪಡಿಸಿರುವುದು ದೃಢವಾಗಿದೆ. ಧರ್ಮವನ್ನು ಗುರಿ ಮಾಡಿ ರಾಜಕೀಯ ಬೇಳೆ ಬೆಯಿಸಲು ನಾವು ಬಿಡುವುದಿಲ್ಲ. ಟಿಪ್ಪು ಮತ್ತು ಅಸ್ಮತ್ತುಲ್ಲಾ ಖಾನ್ ಅವರ ಸಂತತಿಯಾಗಿರುವ ನಾವು ಹೋರಾಟದ ಮೂಲಕ ನ್ಯಾಯಾಲಯದಲ್ಲಿ, ಹೈಕೋರ್ಟ್, ಸುಪ್ರೀಮ್ ಕೋರ್ಟ್‌ನಲ್ಲಿ ಪ್ರಶ್ನಿಸಲಿದ್ದೇವೆ ಎಂದರು.