ಸಮಗ್ರ ನ್ಯೂಸ್: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೇದಾರ್ ಜಾಧವ್ ಅವರ ತಂದೆ ಮಹದೇವ್ ಸೋಪಾನ್ ಜಾಧವ್ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಕ್ರಿಕೆಟಿಗ ಮಾರ್ಚ್ 27 ರಂದು (ಸೋಮವಾರ) ಪುಣೆ ನಗರದ ಅಲಂಕಾರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ಕೇದಾರ್ ಜಾಧವ್ ವರದಿ ಸಲ್ಲಿಸಿದ ನಂತರ, ಪೊಲೀಸರು ಆತನ 75 ವರ್ಷದ ಅವರ ತಂದೆಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ನಾಪತ್ತೆಯಾದ ವರದಿಯ ಪ್ರಕಾರ, ಕೇದಾರ್ ಜಾಧವ್ ಮತ್ತು ಮಹದೇವ್ ಜಾಧವ್ ಪುಣೆ ನಗರದ ಕೊತ್ರೋಡ್ ಪ್ರದೇಶದ ನಿವಾಸಿಗಳು. ಮಹದೇವ್ ಜಾಧವ್ ಮಾರ್ಚ್ 27 ರಂದು ಮುಂಜಾನಾ ಯಾರಿಗೂ ಮಾಹಿತಿ ನೀಡದೇ ಮನೆಯಿಂದ ಹೊರಹೋಗಿದ್ದಾರೆ. ಆ ಬಳಿಕ ಮನೆಗೆ ವಾಪಸಾಗಿಲ್ಲ. ಮಾಹಿತಿಯ ಪ್ರಕಾರ, ಮಹದೇವ್ ಜಾಧವ್ 5 ಅಡಿ 6 ಇಂಚು ಎತ್ತರವಿದ್ದಾರೆ. ಅವರ ಮುಖದ ಎಡಭಾಗದಲ್ಲಿ ಶಸ್ತ್ರಚಿಕಿತ್ಸೆಯ ಗುರುತು ಇದೆ. ನಾಪತ್ತೆಯಾಗುವ ಸಮಯದಲ್ಲಿ ಬಿಳಿ ಅಂಗಿ, ಬೂದು ಬಣ್ಣದ ಪ್ಯಾಂಟ್, ಕಪ್ಪು ಚಪ್ಪಲಿ ಹಾಗೂ ಸ್ವೆಟರ್ ರೀತಿಯ ಬಟ್ಟೆಯನ್ನು ಧರಿಸಿದ್ದರು ಎಂದು ತಿಳಿಸಲಾಗಿದೆ.
ಮಹದೇವ್ ಜಾಧವ್ ಮರಾಠಿ ಮಾತನಾಡುತ್ತಾರೆ ಮತ್ತು ಅವರು ತಮ್ಮ ಬಲಗೈ ಬೆರಳುಗಳಲ್ಲಿ ಎರಡು ಚಿನ್ನದ ಉಂಗುರಗಳನ್ನು ಧರಿಸಿದ್ದರು ಎಂದು ಹೇಳಲಾಗುತ್ತದೆ. ಅವರ ಬಳಿ ಯಾವುದೇ ಮೊಬೈಲ್ ಫೋನ್‌ಗಳಿಲ್ಲ. 38 ವರ್ಷದ ಕೇದಾರ್ ಜಾಧವ್ ಅವರು ತಮ್ಮ ತಂದೆಯ ಫೋಟೋ ಮತ್ತು ಫೋನ್ ಸಂಖ್ಯೆಯನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಅಲ್ಲಿಯೂ ಕೆಲ ವಿವರಗಳನ್ನು ನೀಡಿದ್ದಾರೆ.