ಸಮಗ್ರ ನ್ಯೂಸ್: ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮರುವಿಮರ್ಶೆ ಮಾಡಲು ನಂದಕುಮಾರ್ ಅಭಿಮಾನಿಗಳ ಬಳಗದ ಸಭೆಯಲ್ಲಿ ಒತ್ತಾಯಿಸಲಾಗಿದೆ.
ಸುಳ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಮರುಪರಿಶೀಲನೆ ಮಾಡಬೇಕು. ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಚ್.ಎಂ.ನಂದಕುಮಾರ್ ಅವರನ್ನು ಹೈಕಮಾಂಡ್ ಮರು ಘೋಷಣೆ ಮಾಡಬೇಕು ಎಂದು ಸುಳ್ಯ ಯುವಜನ ಸಂಯುಕ್ತ ಮಂಡಳಿ ಸಭಾ ಭವನದಲ್ಲಿ ನಡೆದ ನಂದಕುಮಾರ್ ಅಭಿಮಾನಿಗಳಾದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಒತ್ತಾಯ ಮಾಡಿದ್ದಾರೆ.
ನಂದಕುಮಾರ್ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಭೇಟಿಗೆ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಪ್ರಬಲ ಆಕಾಂಕ್ಷಿಯಾಗಿದ್ದ ಹೆಚ್.ಎಂ ನಂದಕುಮಾರ್ ಅವರಿಗೆ ಟಿಕೆಟ್ ನೀಡದೇ ಇರುವುದಕ್ಕೆ ವಿರೋಧ ವ್ಯಕ್ತವಾಗಿದೆ.
ನಮಗೆ ಸುಳ್ಯದಲ್ಲಿ ಕಾಂಗ್ರೆಸ್ ಗೆಲ್ಲಬೇಕು ಎನ್ನುವ ಉದ್ದೇಶ ಇದೆ, ಹೀಗಾಗಿ ಜನರೊಂದಿಗೆ ಬೆರೆಯುವ, ಕ್ಷೇತ್ರದಲ್ಲಿ ಅಪಾರ ಜನ ಬೆಂಬಲ ಹೊಂದಿರುವ ನಂದಕುಮಾರ್ ಅವರಿಗೆ ಟಿಕೆಟ್ ನೀಡಬೇಕೆನ್ನುವುದು ನಮ್ಮ ಆಗ್ರಹವಾಗಿದೆ. ಅದನ್ನು ಪರಿಗಣಿಸದೇ ಹೈಕಮಾಂಡ್ ತಪ್ಪು ನಿರ್ಧಾರ ಮಾಡಿದೆ ಎಂದು ಸಭೆಯಲ್ಲಿ ಮಾತನಾಡಿದ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದರು.
ನಂದಕುಮಾರ್ ಅವರು ಕಳೆದ ನಾಲ್ಕು ವರ್ಷಗಳಿಂದ ಸುಳ್ಯ ಕ್ಷೇತ್ರದಲ್ಲಿ ನಿರಂತರವಾಗಿ ಓಡಾಡಿ ಕಾರ್ಯಕರ್ತರೊಂದಿಗೆ ಬೆರೆಯುತ್ತಾ ತಳಮಟ್ಟದಿಂದ ಪಕ್ಷ ಸಂಘಟಿಸಿದ್ದರು. ಕೋವಿಡ್ ಲಾಕ್ ಡೌನ್ ದಿನಗಳಲ್ಲಿ ಕ್ಷೇತ್ರದ ಬಹುತೇಕ ಕಡೆ ಆಹಾರ ಕಿಟ್ಗಳನ್ನು ವಿತರಿಸಿ ಖ್ಯಾತರಾಗಿದ್ದರು.