ಸಮಗ್ರ ನ್ಯೂಸ್: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸಿದ್ದರು ಎನ್ನಲಾದ ಮಾನನಷ್ಟ ಮೊಕದ್ದಮೆ ಕೇಸ್ನಲ್ಲಿ 2 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಲೋಕಸಭಾ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು.
ಇದರ ವಿರುದ್ಧ ಇಡೀ ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಂತೂ ಈ ಹಿಂದೆ ಪ್ರಧಾನಿ ಮೋದಿ ಅವರನ್ನು ನಿಂದಿಸಿದ್ದ ಬಿಜೆಪಿ ನಾಯಕರನ್ನು ಟೀಕಿಸಿ ಟ್ರೋಲ್ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರಿಗೆ ಒಂದು ನ್ಯಾಯ, ಬಿಜೆಪಿಗರಿಗೆ ಒಂದು ನ್ಯಾಯ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಹೀಗೆ ಈ ಹಿಂದೆ ಕಾಂಗ್ರೆಸ್ಸಿನಲ್ಲಿದ್ದಾಗ ಬಹುಭಾಷಾ ನಟಿ ಖುಷ್ಬೂ ಸುಂದರ್ ಅವರು, ಪ್ರಧಾನಿ ಮೋದಿ ಕುರಿತು ಟ್ವೀಟ್ವೊಂದು ಮಾಡಿದ್ದರು. ರಾಹುಲ್ ಗಾಂಧಿ ವಿಚಾರ ಇಡೀ ದೇಶದಲ್ಲಿ ಕಿಡಿ ಹೊತ್ತಿಸಿದ ಬೆನ್ನಲ್ಲೇ ನಟಿ ಖುಷ್ಬೂ ಮಾಡಿದ್ದರು ಎನ್ನಲಾದ ಟ್ವೀಟ್ ಈಗ ವೈರಲ್ ಆಗಿದೆ. ಆದ್ದರಿಂದ ಕೂಡಲೇ ಖುಷ್ಬೂ ಅವರನ್ನು ಬಂಧಿಸಲೇಬೇಕು ಎಂದು ಕಾಂಗ್ರೆಸ್ಸಿಗರು ಒತ್ತಡ ಹಾಕುತ್ತಿದ್ದಾರೆ. ಈಗ ಸೋಷಿಯಲ್ ಮೀಡಿಯಾದಲ್ಲಿ ನಟಿ ಖುಷ್ಬೂ ಮಾಡಿದ್ದ ಟ್ವೀಟ್ ಸಖತ್ ಟ್ರೆಂಡಿಂಗ್ನಲ್ಲಿದೆ.
ಅಲ್ಲೂ ಮೋದಿ, ಇಲ್ಲೂ ಮೋದಿ, ಎಲ್ಲೆಲ್ಲೂ ಮೋದಿ. ಎಲ್ಲಾ ಭಷ್ಟರ ಹೆಸರ ಮುಂದೆಯೂ ಮೋದಿ ಎಂಬ ಸರ್ನೇಮ್ ಇರುತ್ತೆ. ಮೋದಿ ಅಂದರೆ ಭಷ್ಟಾಚಾರ, ಭ್ರಷ್ಟಾಚಾರ ಅಂದರೆ ಮೋದಿ ಎಂದು ಐದು ವರ್ಷಗಳ ಹಿಂದೆ ಖುಷ್ಬೂ ಮಾಡಿದ್ದ ಟ್ವೀಟ್ ಇದಾಗಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಖುಷ್ಬೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅಲ್ಲದೇ ತಮಿಳುನಾಡಿನ ಥೌಸಂಡ್ ಲೈಟ್ಸ್ ಎಂಬ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಈಗ ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದೇ ತಡ ರೊಚ್ಚಿಗೆದ್ದ ಕಾಂಗ್ರೆಸ್ಸಿಗರು ಈಗ ಸಾಮಾಜಿಕ ಜಾಲತಾಣದಲ್ಲಿ ಹಲ್ಚಲ್ ಸೃಷ್ಟಿಸಿದ್ದಾರೆ. ಕೇಂದ್ರ ಬಿಜೆಪಿ ನಾಯಕರಿಗೆ ಖುಷ್ಬೂ ಟ್ವೀಟ್ ಟ್ಯಾಗ್ ಮಾಡಿ ವೈರಲ್ ಮಾಡಿದ್ದಲ್ಲದೇ ತಮ್ಮ ಪಕ್ಷದ ನಾಯಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಖುಷ್ಬೂ ಸುಂದರ್ ಖ್ಯಾತ ಬಹುಭಾಷಾ ನಟಿ. ಭಾರತ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಖುಷ್ಬೂ ತಮಿಳುನಾಡು ಸಕ್ರಿಯ ರಾಜಕಾರಣಕ್ಕೆ ಹಲವು ವರ್ಷಗಳ ಹಿಂದೆಯೇ ಎಂಟ್ರಿ ನೀಡಿದ್ದರು. ಮೊದಲು 2014 ರಲ್ಲಿ ಮಾಜಿ ಸಿಎಂ ಕರುಣಾನಿಧಿ ನೇತೃತ್ವದ ಡಿಎಂಕೆ ಪಕ್ಷ ಸೇರಿದ್ದರು. ಬಳಿಕ ಡಿಎಂಕೆ ತೊರೆದು ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿಯವರ ನಾಯಕತ್ವದಲ್ಲೇ ಅದೇ ವರ್ಷ ಕಾಂಗ್ರೆಸ್ ಸೇರ್ಪಡೆಯಾದರು. ಕಾಂಗ್ರೆಸ್ಸಿನಲ್ಲಿ ರಾಷ್ಟ್ರೀಯ ವಕ್ತಾರೆಯಾಗಿದ್ದ ಖುಷ್ಬೂ ಸಾರ್ವಜನಿಕವಾಗಿಯೇ ಪ್ರಧಾನಿ ಮೋದಿ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ್ದ ಕಟ್ಟರ್ ಗಾಂಧಿ ಅನುಯಾಯಿ ಆಗಿದ್ದರು. ಈಗ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ಈಕೆಯ ಹಳೇ ಟ್ವೀಟ್ವೊಂದು ವೈರಲ್ ಆಗಿ ಆಕೆಗೆ ಕುತ್ತು ತಂದಿದೆ.