ಸಮಗ್ರ ನ್ಯೂಸ್: ಕೆಲಸ ಮಾಡುತ್ತಿದ್ದ ವೇಳೆ ಗುಡ್ಡ ಕುಸಿದ ಪರಿಣಾಮ ಮೂವರು ಕಾರ್ಮಿಕರು ಮಣ್ಣಿನಡಿಗೆ ಸಿಲುಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಸಹಿತ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಶನಿವಾರ ನಗರದ ಗಾಂಧಿನಗರ ಆಲೆಟ್ಟಿ ರಸ್ತೆ ಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾಗ ಗುಡ್ಡ ಕುಸಿದು ಕಾರ್ಮಿಕರ ಮೇಲೆ ಬಿದ್ದಿದೆ ಎಂದು ತಿಳಿದು ಬಂದಿದೆ. ಇಲ್ಲಿನ ಅಬೂಬಕ್ಕರ್ ಎಂಬವರ ಮನೆಯ ಹಿಂದೆ ದೊಡ್ಡ ಗುಡ್ಡವಿದ್ದು, ಇದರ ಸಮೀಪ ಪಿಲ್ಲರ್ ನಿರ್ಮಿಸುವ ಕಾಮಗಾರಿ ನಡೆಯುತ್ತಿರುವ ವೇಳೆ ಈ ದುರ್ಘಟನೆ ಸಂಭವಿಸಿತೆಂದು ತಿಳಿದುಬಂದಿದೆ.
ಸದ್ಯ ಮಣ್ಣಿನಡಿ ಸಿಲುಕಿರುವ ಕಾರ್ಮಿಕರ ಮೃತದೇಹಗಳನ್ನು ಮೇಲೆತ್ತಿ ಸುಳ್ಯ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇಗೊಡ್ಡೆಟ್ಟಿ ಸೋಮಶೇಖರ್ ರೆಡ್ಡಿ (45), ಅವರ ಪತ್ನಿ ಶಾಂತಕ್ಕ (35), ಇನ್ನೊರ್ವ ಯುವಕ ಮೃತರು ಎಂದು ತಿಳಿದುಬಂದಿದೆ.
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಸುಳ್ಯದ ಪೇಟೆ ಸಮೀಪದ ಆಲೆಟ್ಟಿ ರಸ್ತೆಯ ಗುರುಂಪು ಎಂಬಲ್ಲಿ ಘಟನೆ ನಡೆದಿದೆ. ಖಾಸಗಿ ವ್ಯಕ್ತಿಯೋರ್ವರು ತಮ್ಮ ಮನೆ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಪಿಲ್ಲರ್ ಕಾಮಗಾರಿ ನಡೆಸುವ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದರು. ಕಾರ್ಮಿಕರು ಇಂದು ಕೆಲ ನಿರ್ವಹಿಸುವ ವೇಳೆ ಒಮ್ಮೆಲೇ ಮಣ್ಣು ಕುಸಿದು ಬಿದ್ದಿದೆ. ಘಟನೆ ವೇಳೆ ಏಳು ಮಂದಿ ಸ್ಥಳದಲ್ಲಿದ್ದು ನಾಲ್ವರು ಓಡಿ ಪಾರಾಗಿದ್ದು, ಮೂವರು ಮಣ್ಣಿನಡಿ ಸಿಲುಕಿದ್ದರು. ಘಟನೆ ನಡೆದ ಕೂಡಲೇ ಜೆಸಿಬಿ ಮೂಲಕ ಮಣ್ಣಿನಡಿ ಸಿಲುಕಿದ್ದವರ ಹೊರತೆಗೆಯಲು ಕಾರ್ಯಾಚರಣೆ ಆರಂಭಿಸಲಾಗಿದ್ದು, ಮಣ್ಣಿನಡಿ ಸಿಲುಕಿದ್ದವರನ್ನು ಹೊರತಗೆಯುವ ವೇಳೆಗೆ ಮೂವರು ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ಸತತ ಒಂದುವರೆ ಗಂಟೆಗೂ ಅಧಿಕ ಸಮಯ ಕಾರ್ಯಾಚರಣೆ ನಡೆಸಲಾಯಿತು.
ಘಟನಾ ಸ್ಥಳಕ್ಕೆ ಸಚಿವ ಎಸ್.ಅಂಗಾರ, ತಹಶೀಲ್ದಾರ್ ಮಂಜುನಾಥ್, ತಾ.ಪಂ ಇಒ ಭವಾನಿಶಂಕರ್, ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಮುಖ್ಯಾಧಿಕಾರಿ ಸುಧಾಕರ್, ಸುಳ್ಯ ಪೊಲೀಸರು, ಅಗ್ನಿಶಾಮಕ ದಳದವರು ಮತ್ತಿತರರು ಭೇಟಿ ನೀಡಿದ್ದಾರೆ.