ಸಮಗ್ರ ನ್ಯೂಸ್: ಮನೆಯಲ್ಲಿ ಆಟವಾಡುತ್ತಿದ್ದಾಗ 8 ತಿಂಗಳ ಮಗುವೊಂದು ಉಂಗುರ ನುಂಗಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮುನೀರ್ ಎನ್ನುವವರ ಮಗು ಮೃತಪಟ್ಟಿದೆ.
ಮಗು ಬುಧವಾರ ರಾತ್ರಿ ಮನೆಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಉಂಗುರ ನುಂಗಿತ್ತು. ತಕ್ಷಣ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಗುವನ್ನು ದಾಖಲಿಸಿದರೂ ಉಸಿರಾಟದ ಸಮಸ್ಯೆಯಿಂದಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಜಿಲ್ಲಾ ಆಸ್ಪತ್ರೆಯ ವೈದ್ಯರ ತಂಡ ರಾತ್ರಿ 9 ಗಂಟೆಯಿಂದ ಸುಮಾರು 12 ಗಂಟೆಯವರೆಗೆ ನಿರಂತರವಾಗಿ ಶ್ರಮಪಟ್ಟು ಶಸ್ತ್ರಚಿಕಿತ್ಸೆ ಮೂಲಕ ಉಂಗುರವನ್ನು ಹೊರತೆಗೆಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ ಮಗು ಮೃತಪಟ್ಟಿದೆ.
ಈ ಬಗ್ಗೆ ವೈದ್ಯರು ಮಾತನಾಡಿದ್ದು, ನಿಮ್ಮ ಮಕ್ಕಳ ಬಗ್ಗೆ ಒಂದಷ್ಟು ಎಚ್ಚರಿಕೆ ಇರುವಂತೆ ಹಾಗೂ ಈ ರೀತಿಯಲ್ಲಿ ಉಂಗುರ ನಾಣ್ಯಗಳನ್ನು ಮಕ್ಕಳ ಮುಂದೆ ಇಡುವ ಮುಂಚೆ ಎಚ್ಚರಿಕೆ ಇರುವಂತೆ ಮನವಿ ಮಾಡಿದ್ದಾರೆ.