ಸಮಗ್ರ ನ್ಯೂಸ್: ಇಂದು (ಮಾರ್ಚ್ 17) ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನ. ಇದು ಪುನೀತ್ ಇಲ್ಲದೆ ಆಚರಿಸಲಾಗುತ್ತಿರುವ ಎರಡನೇ ಜನ್ಮದಿನ. ಪುನೀತ್ ಅವರಿಗೆ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ. ಪುನೀತ್ (Puneeth Rajkumar) ನಮ್ಮ ಜೊತೆ ಇದ್ದಿದ್ದರೆ ಈ ದಿನದ ಮೆರುಗು ಮತ್ತಷ್ಟು ಹೆಚ್ಚುತ್ತಿತ್ತು. ಆದರೆ, ಅವರಿಲ್ಲ ಎನ್ನುವ ಬೇಸರದಲ್ಲೇ ಈ ದಿನವನ್ನು ಆಚರಿಸಲಾಗುತ್ತಿರುವುದು ನಿಜಕ್ಕೂ ದುಃಖಕರ ವಿಚಾರ. ಪುನೀತ್ ಜನ್ಮದಿನಕ್ಕೆ ಅಭಿಮಾನಿಗಳಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವಿಶೇಷ ದಿನದಂದು ‘ಕಬ್ಜ’ ಕೂಡ ರಿಲೀಸ್ ಆಗುತ್ತಿರುವುದು ವಿಶೇಷ.
ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ರಾಜ್‍ಕುಮಾರ್ ಕುಟುಂಬ ಆಗಮಿಸಿ, ಪೂಜೆ ಸಲ್ಲಿಕೆ ಮಾಡಲಿದೆ. ಈಗಾಗಲೇ ಪುನೀತ್ ರಾಜ್‍ಕುಮಾರ್ ಅವರ ಸಮಾಧಿಯನ್ನು ಅಲಂಕರಿಸುವ ಕೆಲಸ ಆಗಿದೆ. ಅಶ್ವಿನಿ ಪುನೀತ್ ರಾಜ್‍ಕುಮಾರ್, ಶಿವರಾಜ್ಕುಮಾರ್ ಸೇರಿದಂತೆ ಕುಟುಂಬದ ಅನೇಕರು ಕಂಠೀರವ ಸ್ಟುಡಿಯೋಗೆ ಬಂದು ಪೂಜೆಯಲ್ಲಿ ಭಾಗಿ ಆಗಲಿದ್ದಾರೆ. ಅಪ್ಪು ಜನ್ಮದಿನ ಅವರ ಸಮಾಧಿಗೆ ಭೇಟಿ ನೀಡಬೇಕು ಅನ್ನೋದು ಅನೇಕ ಅಭಿಮಾನಿಗಳ ಆಸೆ. ಈ ಕಾರಣಕ್ಕೆ ಕಂಠೀರವ ಸ್ಟುಡಿಯೋದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆಯಲಿದ್ದಾರೆ.