ಸಮಗ್ರ ನ್ಯೂಸ್: ಒಂದೆರಡು ದಿನಗಳ ಹಿಂದೆ ರಾಷ್ಟ್ರಕವಿ ಕುವೆಂಪು ನಾಡು ತೀರ್ಥಹಳ್ಳಿಯಲ್ಲಿ ಮಾಜಿ ಶಿಕ್ಷಣ ಸಚಿವ, ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ಆಯೋಜನೆಯಲ್ಲಿ ಮಂಗಳೂರಿನ ಖ್ಯಾತ ನಿರ್ದೇಶಕರಾದ ವಿಜಯ ಕುಮಾರ್ ಕೋಡಿಯಾಲ್ ಬೈಲ್ ಹಾಗೂ ಕಾಂತಾರ ನಟ ಸ್ವರಾಜ್ ಶೆಟ್ಟಿ ಅಭಿನಯದ ಅತೀ ಹೆಚ್ಚು ಪ್ರದರ್ಶನಗೊಂಡ ’ಶಿವದೂತೆ ಗುಳಿಗೆ’ ಎಂಬ ಪುಣ್ಯ ಕಥಾ ನಾಟಕವೊಂದು ಪ್ರದರ್ಶನಗೊಂಡಿತ್ತು. ಕಿಕ್ಕಿರಿದ ಸಭೆಯ ನಡುವೆ ಗುಳಿಗನ ಅಬ್ಬರ ಮಲ್ನಾಡ್ ನಲ್ಲಿ ಭಾರೀ ಸಂಚಲನ ಮೂಡಿಸಿದ್ದು, ನಾಟಕ ನೋಡಲು ಸಾವಿರಾರು ಮಂದಿ ಪ್ರೇಕ್ಷಕರು ನೆರೆದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆಯೂ ವ್ಯಕ್ತವಾಗಿತ್ತು.
ಇದರ ಬೆನ್ನಲ್ಲೇ ಗೃಹ ಸಚಿವ ಆರಗ ಜ್ಞಾನೇಂದ್ರ ಸಭೆಯೊಂದರ ವೇದಿಕೆಯಲ್ಲಿ ತುಳುನಾಡಿನ ಗುಳಿಗ ದೈವಕ್ಕೆ ಅವಮಾನ ಆಗುವಂತಹ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎನ್ನುವ ವಿಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುವುದರೊಂದಿಗೆ, ಸಚಿವರ ನಡೆಗೆ, ತುಳುನಾಡನ್ನು ಅವಮಾನಿಸಿದ ರೀತಿಗೆ ಆಕ್ರೋಶ ಹೊರಬಿದ್ದಿತ್ತು. ತೀರ್ಥಹಳ್ಳಿಯಲ್ಲಿ ನಡೆದ ನಾಟಕದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಬ್ಯಾನರ್ ಹಾಕಿದ್ದೇ ಇದಕ್ಕೆ ಕಾರಣ ಎನ್ನಲಾಗಿದ್ದು, ಬ್ಯಾನರ್ ನಲ್ಲಿ ಗುಳಿಗ, ಶಿವದೂತ ಗುಳಿಗೆ ಎಂದು ಬರೆದಿರುವುದನ್ನು ಕಂಡ ಆರಗ ಜ್ಞಾನೇಂದ್ರರು ಅದನ್ನೇ ಅಪಹಾಸ್ಯ ಮಾಡುವ ರೀತಿಯಲ್ಲಿ ನಾಲಗೆ ಹರಿಬಿಟ್ಟದ್ದೇ ಚರ್ಚೆಗೆ ಮೂಲ ಕಾರಣವಾಗಿದೆ.
ಇಂದು ಗುಳಿಗ, ಗುಳಿಗೆ ಎನ್ನುತ್ತಾ ನಾಳೆ ಕಾಂಗ್ರೆಸ್ ನವರು ಜಾಪಾಳ ಗುಳಿಗೆ ಕೊಡುವ ಅಪಾಯವಿದೆ ಎನ್ನುವ ಮೂಲಕ ತುಳುನಾಡಿನ ಆರಾಧ್ಯ, ಶಕ್ತಿ ದೈವ ಗುಳಿಗನಿಗೆ ಅಪಹಾಸ್ಯ ಮಾಡಿದ್ದರೂ ಇಲ್ಲಿನ ಶಾಸಕರು, ಸಚಿವರುಗಳು ಮೌನಕ್ಕೆ ಶರಣಾಗಿದ್ದಾರೆ ಎನ್ನುತ್ತಾ ತುಳುವರು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಹಾಗೂ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದು, “ಅಕುಲು ದೈವದ ನಾಟಕ ಮಂತೆರ್-ಮುಕುಲು ಹಿಂದುತ್ವದ ನಾಟಕ ಮಂತೆರ್” ಎನ್ನುವಂತಹ ಬರಹ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪೋಸ್ಟರ್ ಬರಹ
ಈ ಬಗ್ಗೆ ಗೃಹ ಸಚಿವರು ಕ್ಷಮೆ ಯಾಚಿಸಿದ್ದರೂ, ಹಿಂದುತ್ವದ ಆಧಾರದಲ್ಲೇ ಅಧಿಕಾರಕ್ಕೆ ಏರುವ ಬಿಜೆಪಿಗರು ಪದೇ ಪದೇ ತುಳುನಾಡಿನ ಬಗ್ಗೆ ಅಗೌರವ ತೋರುತ್ತಿರುವ ಬಗ್ಗೆ ಅಲ್ಲಲ್ಲಿ ಭಾರೀ ಚರ್ಚೆಗಳು ಏರ್ಪಟ್ಟಿದ್ದು, ಮುಂದಿನ ಚುನಾವಣೆಯಲ್ಲಿ ಗುಳಿಗನೇ ಸಚಿವರಿಗೆ ದಾರಿ ತೋರಿಸುತ್ತಾನೆ ಎಂಬ ಸಂದೇಶಗಳು ರವಾನೆಯಾಗುತ್ತಿವೆ.