ಸಮಗ್ರ ನ್ಯೂಸ್: ಕೆಲವು ದಿನಗಳಿಂದ ಕಾದ ಕೆಂಡದಂತಾಗಿದ್ದ ಕರಾವಳಿ ಭಾಗದ ಕೆಲವು ಕಡೆಗಳಲ್ಲಿ ಮಂಗಳವಾರ ಗುಡುಗು ಸಹಿತ ಸಾಧಾರಣ ಮಳೆ ಸುರಿದಿದ್ದು, ವಾತಾವರಣ ತುಸು ತಂಪಾಗಿದೆ.
ಮಂಗಳೂರು ಸಹಿತ ಕೆಲವು ಕಡೆ ಮೋಡದ ವಾತಾವರಣ ಇತ್ತು. ದಿನವಿಡೀ ಉರಿ ಸೆಕೆ, ಬೆಳಗ್ಗೆ ವೇಳೆ ಮಂಜಿನಿಂದ ಕೂಡಿದ ವಾತಾವರಣ ಇತ್ತು.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿಯ ಪ್ರಕಾರ ಮುಂದಿನ ಮೂರು ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.
ಕೆಲವು ದಿನಗಳಿಂದ ಕರಾವಳಿ ಭಾಗದಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಭಾರೀ ಏರಿಕೆ ಕಾಣುತ್ತಿತ್ತು. ಅಲ್ಲದೆ ಬಿಸಿ ಗಾಳಿಯ ಎಚ್ಚರಿಕೆ, ಸಮುದ್ರದ ಅಲೆಗಳ ಅಬ್ಬರದ ಎಚ್ಚರಿಕೆಯನ್ನೂ ಹವಾಮಾನ ಇಲಾಖೆ ನೀಡಿತ್ತು.
ಹವಾಮಾನ ಇಲಾಖೆಯು ಹಲವು ತಿಂಗಳ ಬಳಿಕ ಕರಾವಳಿ ಭಾಗದಲ್ಲಿ “ಎಲ್ಲೋ ಅಲರ್ಟ್’ ಘೊಷಿಸಿದೆ. ಮುನ್ಸೂಚನೆಯ ಪ್ರಕಾರ ಮಾ. 15ರಿಂದ 17ರವರೆಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.