Ad Widget .

Migration to cities| ಎಲೆಚುಕ್ಕಿ ರೋಗದಿಂದ ಊರು ಬಿಟ್ಟ ಶೃಂಗೇರಿ ಜನ| ಮಲೆನಾಡ ಅಡಿಕೆ ಬೆಳೆಗಾರರಿಗೆ ಪಟ್ಟಣವೇ ಗತಿ!!

ಸಮಗ್ರ ನ್ಯೂಸ್: ನೂರಾರು ವರ್ಷಗಳಿಂದ ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ಹೋಗುತ್ತಿರುವ ಜನ, ಕೃಷಿ ಮೇಲೆ ನಂಬಿಕೆ ಕಳೆದುಕೊಂಡು ಮಲೆನಾಡಿನ ಹಲವೆಡೆ ಜನ ಪಟ್ಟಣ ಸೇರುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ ಭಾಗದಲ್ಲಿ ಹಲವು ಕುಟುಂಬಗಳು ಪಟ್ಟಣ ಸೇರಿದ್ದಾರೆ ‌ಎಂದರೆ ನೀವು ನಂಬಲೇಬೇಕು, ಕಳೆದ ಒಂದೇ ವರ್ಷದ ಅವಧಿಯಲ್ಲಿ 300ಕ್ಕೂ ಅಧಿಕ ಕುಟುಂಬಗಳು ಮನೆ, ತೋಟ ಎಲ್ಲವನ್ನೂ ಬಿಟ್ಟು ಪಟ್ಟಣ ಸೇರಿವೆ. ಯಾವ ಮನೆಯಲ್ಲೂ ಜನರಿಲ್ಲ. ತೋಟ, ಮನೆಗಳು ಸುಮ್ಮನೆ ಅನಾಥವಾಗಿ ಬಿದ್ದಿವೆ.

Ad Widget . Ad Widget .

ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬೂಮ್‌ ಪಡೆದುಕೊಂಡು, ಮಕ್ಕಳೆಲ್ಲ ಎಂಜಿನಿಯರ್‌ಗಳಾಗಿ ಬೆಂಗಳೂರು ಸೇರಿಕೊಂಡ ಮೇಲೆ ಊರಿನಲ್ಲಿ ಉಳಿದದ್ದು ವಯಸ್ಸಾದ ಹೆತ್ತವರು ಮಾತ್ರ. ಅದರೆ, ಈಗ ಅವರು ಕೂಡಾ ಊರಿನ ಸಹವಾಸವೇ ಬೇಡವೆಂದು ಮಕ್ಕಳ ಮನೆ ಕಡೆಗೆ ಧಾವಿಸುತ್ತಿದ್ದಾರೆ. ಇದಕ್ಕೆ ಕಾರಣ ಅಡಿಕೆ ತೋಟಕ್ಕೆ ತಗುಲಿದ ಮಾರಕ ಎಲೆ ಚುಕ್ಕಿ ರೋಗ.

Ad Widget . Ad Widget .

ಮಕ್ಕಳೆಲ್ಲ ಮನೆ ಬಿಟ್ಟು ಹೋದರೂ, ಬೆಂಗಳೂರಿನಲ್ಲಿ ಕಾಯಂ ವಿಳಾಸ ಮಾಡಿಕೊಂಡರೂ ವಯಸ್ಸಾದ ಹೆತ್ತವರಿಗೆ ಮನೆ, ತೋಟ ಎನ್ನುವ ಕರುಳಬಳ್ಳಿಯ ಸಂಬಂಧವೊಂದು ಗಾಢವಾಗಿ ಕಾಡುತ್ತಿತ್ತು. ಅಡಕೆಯೊಂದಿಗಿನ ಉಪ ಬೆಳೆಗಳು, ಹೈನುಗಾರಿಕೆಯ ಸೆಳೆತಗಳು ಅವರನ್ನು ಊರಿನಲ್ಲಿ ಕಟ್ಟಿಹಾಕಿದ್ದವು. ಆದರೆ, ಯಾವಾಗ ಎಲೆ ಚುಕ್ಕಿ ರೋಗ ಈ ಭಾಗವನ್ನು ಗಾಢವಾಗಿ ತಟ್ಟಿ ತೋಟಗಳನ್ನು ಸರ್ವ ನಾಶದ ಹೊಸ್ತಿಲಿಗೆ ತಂದು ನಿಲ್ಲಿಸಿತೋ ಈಗ ಅವರು ಕೂಡಾ ಮನೆ ಬಿಟ್ಟು ದೂರ ಹೋಗಲು ಮುಂದಾಗಿದ್ದಾರೆ. ಕಣ್ಣೆದುರಿಗೇ ತಾವೇ ನೆಟ್ಟು ಮಾಡಿದ ತೋಟಗಳು ಸರ್ವನಾಶವಾಗುವುದನ್ನು ಕಾಣಲು ಸಾಧ್ಯವಾಗದೆ ಅವರು ತಮ್ಮ ಮಕ್ಕಳು ಇರುವ ಪಟ್ಟಣದ ಕಡೆಗೆ ಸಾಗುತ್ತಿದ್ದಾರೆ. ಹೀಗಾಗಿ ಊರ ತುಂಬಾ ನೀರವ ಮೌನ ಆವರಿಸಿದೆ.

ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಹಳದಿ ರೋಗ ಕಾಣಿಸಿಕೊಂಡಿದ್ದು ಶೃಂಗೇರಿಯಲ್ಲಿ, ಮತ್ತೆ ಅದೇ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದ್ದು ಶೃಂಗೇರಿಯಲ್ಲೇ, ಪರಿಣಾಮ ಸ್ಥಳೀಯ ರೈತರ ಬದುಕು ಮೂರಾಬಟ್ಟೆಯಾಗಿದೆ. ಎಷ್ಟರಮಟ್ಟಿಗೆ ಅಂದ್ರೆ ತಾಲೂಕಿನ ನೆಮ್ಮಾರು, ಮೆಣಸೆ, ಮಾವಿನಕುಡಿಗೆ, ಅಗಳ ಗಂಡಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಬರೋಬ್ಬರಿ 300ಕ್ಕೂ ಹೆಚ್ಚು ಕುಟುಂಬಗಳು ಹುಟ್ಟಿ ಬೆಳೆದ ತೋಟ ಮನೆ ಜಮೀನು ತೊರೆದು ನಗರ ಪ್ರದೇಶ ಸೇರಿದ್ದಾರೆ.

ಶೃಂಗೇರಿ ಕೊಪ್ಪ ಭಾಗದಲ್ಲೇ ರೋಗದ ಭೀಕರತೆ ಎದ್ದು ಕಾಣುತ್ತಿದ್ದು, ಪುರಾತನ ಕಾಲದಿಂದಲೂ ಅಡಿಕೆ ಬೆಳೆಯನ್ನೇ ನಂಬಿಕೊಂಡಿದ್ದ ಅದೆಷ್ಟೋ ಕುಟುಂಬಗಳು ಬೀದಿ ಪಾಲಾಗಿವೆ. ಶೃಂಗೇರಿ ಹಾಗೂ ಕೊಪ್ಪ ತಾಲೂಕಿನ ಬಹುತೇಕ ಅಡಿಕೆ ತೋಟಗಳು ವಿನಾಶದ ಅಂಚಿಗೆ ತಲುಪಿದ್ದು, ರೈತರ ಬದುಕಿಗೆ ಮುಂದೇನು ಎಂದು ಯೋಚಿಸುವಂತೆ ಮಾಡಿದೆ ಮಹಾಮಾರಿ ರೋಗ.

ಒಟ್ಟಾರೆ ಬದುಕುವುದಕ್ಕೆ ಆಸರೆಯಾಗಿ ಊರ ಜನ ಪಟ್ಟಣದತ್ತ ಹೆಜ್ಜೆ ಹಾಕಿದ್ದು, ಆಡಳಿತ ವರ್ಗದ ಸಹಾಯವೂ ಇವರ ಪಾಲಿಗೆ ಮರೀಚಿಕೆಯಾಗಿದೆ. ಅಡಿಕೆ ಬೆಳೆಗಾರರ ಪರಿಸ್ಥಿತಿ ದುರ್ಗತಿಯತ್ತ ತಲುಪಿದೆ.

Leave a Comment

Your email address will not be published. Required fields are marked *