ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಸುಮಾರು 17,000 ಮಂದಿ ಶತಾಯುಷಿಗಳಿದ್ದು, ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಚುನಾವಣಾ ಆಯೋಗ ಶನಿವಾರ (ಮಾರ್ಚ್ 11) ಘೋಷಿಸಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಸಿದ್ಧತೆ ಕುರಿತು ಕರೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣಾ ಆಯುಕ್ತ ಅನುಪ್ ಚಂದ್ರ ಪಾಂಡೆ ಮತ್ತು ಅರುಣ್ ಗೋಯೆಲ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಒಟ್ಟು 58,282 ಮತಗಟ್ಟೆ ಸ್ಥಾಪಿಸಲಾಗುವುದು. ಒಂದು ಮತಗಟ್ಟೆಯಲ್ಲಿ 883 ಜನರು ಮತ ಚಲಾಯಿಸಬಹುದು. ನಗರ ಪ್ರದೇಶದಲ್ಲಿ 24,063 ಮತಗಟ್ಟೆ ಸ್ಥಾಪಿಸಲಾಗುವುದು. ರಾಜ್ಯದಲ್ಲಿ ಮೇ 24ಕ್ಕೂ ಮೊದಲು ಚುನಾವಣೆ ನಡೆಸಬೇಕಾಗಿದೆ. ವಿಶೇಷ ಚೇತನರಿಗೆ ವ್ಹೀಲ್ ಚೇರ್ ಸೇರಿದಂತೆ ಮನೆಯಲ್ಲಿಯೇ ಮತದಾನ ಮಾಡಲು ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಆಯೋಗ ತಿಳಿಸಿದೆ.
ಯಾವುದೇ ಕಾರಣಕ್ಕೂ ಇವಿಎಂಗಳನ್ನು ಬದಲಾಯಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಕಾಂಗ್ರೆಸ್ ಪಕ್ಷದ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಎಲ್ಲೆಡೆ ಬಳಸಿದ ಇವಿಎಂಗಳನ್ನೇ ಕರ್ನಾಟಕ ಚುನಾವಣೆಗೆ ಬಳಸಲಾಗುವುದು. ಈ ಹಿಂದೆಯೂ ಇವಿಎಂಗಳ ಬಗ್ಗೆ ಆರೋಪ ಕೇಳಿ ಬಂದಿತ್ತು ಎಂದು ಆಯೋಗ ಹೇಳಿದೆ.