ಸಮಗ್ರ ನ್ಯೂಸ್: ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬೇಲೂರು ತಾಲೂಕಿನ ವಸತಿ ಶಾಲೆಯ ಪ್ರಾಂಶುಪಾಲೆ ಸೇರಿದಂತೆ ಐವರನ್ನು ಪೊಲೀಸರು ಶುಕ್ರವಾರ (ಮಾರ್ಚ್ 10) ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುನಿತ್ (28), ಶಿಕ್ಷಕ ಶಿವಯ್ಯ (32), ಪ್ರಾಂಶುಪಾಲೆ ಗೀತಾಬಾಯಿ (38), ಭದ್ರತಾ ಸಿಬ್ಬಂದಿ ಶ್ರುತಿ ಬಿ.ಸಿ (30), ಶಿಕ್ಷಕ ವಿಜಯಕುಮಾರ (39) ಬಂಧಿತ ಆರೋಪಿಗಳಾಗಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಕಳೆದ ಕೆಲವು ತಿಂಗಳುಗಳಿಂದ ವಸತಿ ಶಾಲೆಯ ಎಂಟು ಅಪ್ರಾಪ್ತ ವಿದ್ಯಾರ್ಥಿಗಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಈ ವಾರದ ಆರಂಭದಲ್ಲಿ, ವಿದ್ಯಾರ್ಥಿಗಳು ಪ್ರಾಂಶುಪಾಲರನ್ನು ಬದಲಾಯಿಸುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸ್ ತಂಡ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಕಲ್ಯಾಣ ಸಮಿತಿಯ ಪ್ರತಿನಿಧಿಗಳು ಶಾಲೆಗೆ ಭೇಟಿ ಪರಿಶೀಲನೆ ನಡೆಸಿದ್ದರು. ಸಂವಾದದ ಸಂದರ್ಭದಲ್ಲಿ, ಪ್ರತಿಭಟನಾನಿರತ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿನ ಸಿಬ್ಬಂದಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಹೇಳಿಕೆಗಳನ್ನು ಆಧರಿಸಿ, ಪೊಲೀಸರು ಒಂದೆರಡು ಸಿಬ್ಬಂದಿಯನ್ನು ಕರೆದೊಯ್ದು ಹೆಚ್ಚಿನ ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.