ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಸವಲತ್ತುಗಳನ್ನು ಶೇ 98ರಷ್ಟು ಫಲಾನುಭವಿಗಳಿಗೆ ತಲುಪಿಸಲಾಗಿದ್ದು, ಮಾರ್ಚ್ ಅಂತ್ಯಕ್ಕೆ ಸಂಪೂರ್ಣ ಗುರಿ ಸಾಧಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.
ಕಟಪಾಡಿಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ನಡೆದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಮಾತೃವಂದನಾ ಯೋಜನೆಯಡಿಯಲ್ಲಿ 38,915 ಫಲಾನುಭವಿಗಳಿಗೆ ₹ 17.14 ಕೋಟಿ ನೀಡಲಾಗಿದ್ದು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ.
ಜಲಜೀವನ್ ಮಿಷನ್ ಯೋಜನೆಯಡಿ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ 1,75,265 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿ ₹ 269 ಕೋಟಿ ವೆಚ್ಚ ಮಾಡಲಾಗಿದೆ. ಮೀನುಗಾರರ ಅನುಕೂಲಕ್ಕಾಗಿ 8,030 ನಾಡದೋಣಿಗಳಿಗೆ 10 ತಿಂಗಳು ತಲಾ 300 ಲೀಟರ್ ಸೀಮೆಎಣ್ಣೆ ಹಾಗೂ ಯಾಂತ್ರೀಕೃತ ಬೋಟುಗಳಿಗೆ 2.5 ಲಕ್ಷ ಕೆಎಲ್ ಡೀಸೆಲ್ ವಿತರಿಸಲಾಗಿದ್ದು ಮೀನು ಉತ್ಪಾದನೆಯಲ್ಲಿ ರಾಜ್ಯವು ದೇಶದಲ್ಲೇ 3ನೇ ಸ್ಥಾನ ಪಡೆದಿದೆ ಎಂದರು.