ಸಮಗ್ರ ನ್ಯೂಸ್: ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಇಂದು ಬೆಂಗಳೂರಿನ ಎಲ್ಲಾ ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ.
ಮಹಿಳೆಯರಿಗೆ ಸುರಕ್ಷಿತ ಮತ್ತು ಭದ್ರತೆಯುಳ್ಳ ಸಾರ್ವಜನಿಕ ಸಾರಿಗೆ ಸೌಲಭ್ಯ ಒದಗಿಸುವುದು ಬಿಎಂಟಿಸಿ ಉದ್ದೇಶವಾಗಿದೆ. ಮಹಿಳಾ ದಿನದಂದು ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರು ಒಂದು ದಿನ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ಮೂಲಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕುರಿತು ಅರಿವು ಮೂಡಿಸಿದಂತಾಗಲಿದೆ. ಜೊತೆಗೆ ವಿಶ್ವ ಮಹಿಳಾ ದಿನದಂದು ಮಹಿಳೆಯರಿಗೆ ವಿಶೇಷ ಕೊಡುಗೆ ನೀಡಿದಂತಾಗಲಿದೆ ಎಂದು ನಿಗಮ ಚಿಂತನೆ ನಡೆಸಿದ್ದು ಪ್ರಸ್ತಾವನೆ ಮೂಲಕ ಸರ್ಕಾರಕ್ಕೆ ಈ ಕುರಿತು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆ.
ಬೆಂಗಳೂರಿನಲ್ಲಿ 40,86,580 ಮಹಿಳೆಯರಿದ್ದು, ಅದರಲ್ಲಿ ಪ್ರತಿದಿನ 10,21,645 ಮಂದಿ ಮಹಿಳೆಯರು ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಮಹಿಳಾ ದಿನವಾದ ಮಾರ್ಚ್ 8ರಂದು ಉಚಿತ ಬಸ್ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರೆ ಅಂದಾಜು 20.44 ಲಕ್ಷ ಮಹಿಳೆಯರು ಪ್ರಯಾಣಿಸುವ ಸಾಧ್ಯತೆ ಇದೆ. ಇದರಿಂದ ಬಿಎಂಟಿಸಿಗೆ ಸುಮಾರು 8.17 ಕೋಟಿ ಖರ್ಚಾಗುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.