ಸಮಗ್ರ ನ್ಯೂಸ್: ಲಂಚ ಪಡೆದ ಆರೋಪಕ್ಕೆ ಗುರಿಯಾಗಿ ಬಂಧನದ ಭೀತಿ ಎದುರಿಸುತ್ತಿದ್ದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ.ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಸಂಬಂಧ ವಿರೂಪಾಕ್ಷಪ್ಪ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಮೇಲ್ಮನವಿಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೆ.ನಟರಾಜನ್ ಅವರು ಮಂಗಳವಾರ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಕೆ.ಸುಮನ್ ಅವರು, “ಎಫ್ ಐ ಆರ್ ನಲ‌್ಲಿ ಅರ್ಜಿದಾರರ ವಿರುದ್ಧ ಆರೋಪ ಸಾಬೀತುಪಡಿಸಲು ಯಾವುದೇ ಸಾಕ್ಷಿಗಳಿಲ್ಲ. ಟೆಂಡರ್ ಗೆ ಲಂಚ ನೀಡುವಂತೆ 30ರಷ್ಟು ಕಮಿಷನ್ ಬೇಡಿಕೆ ಇಟ್ಟಿರುವ ಬಗ್ಗೆ, ಪ್ರಯತ್ನ ನಡೆಸಿರುವ ಬಗ್ಗೆ ಅಥವಾ ನಿರ್ದಿಷ್ಟ ದಿನದಂದು ಲಂಚ ಕೊಡುವಂತೆ ಕೇಳಿದ ಬಗ್ಗೆ ಇನಿತೂ ಸಾಕ್ಷಿ ಇಲ್ಲ. ಮಗ ಮತ್ತು ತಂದೆಗೆ ಇದರಲ್ಲಿ ಯಾವುದೇ ಸಂಬಂಧ ಇಲ್ಲ. ವಿರೂಪಾಕ್ಷಪ್ಪ ಅವರಿಗೀಗ 75 ವರ್ಷ. ನಾಲ್ಕು ಬಾರಿ ಶಾಸಕರು. ಮೇಲಾಗಿ ಹೃದಯ ಸಂಬಂಧಿತ ಸಮಸ್ಯೆ ಹೊಂದಿದ್ದಾರೆ. ವಿಚಾರಣೆಗೆ ಹಾಜರಾದರೆ ಲೋಕಾಯುಕ್ತ ಪೊಲೀಸರು ಬಂಧಿಸುವ ಭೀತಿ ಇದೆ. ಆದ್ದರಿಂದ, ನಿರೀಕ್ಷಣಾ ಜಾಮೀನು ನೀಡಬೇಕು” ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಯಾಗಿ ಲೋಕಾಯುಕ್ತ ಪರ ಹಾಜರಾಗಬೇಕಿದ್ದ ವಕೀಲ ಬಿ.ಬಿ.ಪಾಟೀಲ ಅವರು ಗೈರಾಗಿದ್ದರು. ಅವರ ಕಚೇರಿಯ ಕಿರಿಯ ವಕೀಲ ಪ್ರತಿವಾದ ಮಂಡಿಸಿ. ‘ಈ ಪ್ರಕರಣದಲ್ಲಿ ತನಿಖಾಧಿಕಾರಿಯಿಂದ ಹೆಚ್ಚಿನ ವಿವರಣೆ ಪಡೆಯಬೇಕಿದೆ’ ಎಂದರು.
ಉಭಯತ್ರರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಆರೋಪಿ ವಿರೂಪಾಕ್ಷಪ್ಪ ಮುಂದಿನ 48 ಗಂಟೆಗಳ ಒಳಗಾಗಿ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ಈ ವೇಳೆ ತನಿಖಾಧಿಕಾರಿಯು ಆರೋಪಿಯನ್ನು ಬಂಧಿಸಬಾರದು ಎಂದು ಆದೇಶಿಸಿದರು.