Ad Widget .

ಬಣ್ಣಗಳೆಷ್ಟೇ ಇದ್ದರೂ ಅಂತಿಮವಾಗಿ ಒಂದೇ ಬಣ್ಣವಲ್ಲವೇ? ಸಂಭ್ರಮದ ಹೊನಲು; ಖುಷಿಯ ಕಡಲು – ಹೋಳಿ

ಸಮಗ್ರ ವಿಶೇಷ: ಜಗತ್ತಿನಲ್ಲೆ ಅತ್ಯಂತ ವರ್ಣಮಯ ಹಬ್ಬ ಎಂದರೆ ಅದು ನಮ್ಮ ದೇಶದಲ್ಲಿ ಆಚರಿಸಲ್ಪಡುವ ಹೋಳಿಹಬ್ಬ. ಪ್ರತಿ ವರ್ಷ ಹೋಳಿಹಬ್ಬದ ಆಚರಣೆಯ ಸಂದರ್ಭದಲ್ಲಿ ದೇಶವ್ಯಾಪಿಯಾಗಿ ಜಾತಿಭೇದ, ಲಿಂಗಭೇದ ಮರೆತು ಜನರು ಪರಸ್ಪರ ಬಣ್ಣಗಳನ್ನು ಎರಚಾಡುತ್ತ ಹಾಡುತ್ತ ಕುಣಿಯುತ್ತ ಸಂಭ್ರಮಿಸುವ ಕಾರಣದಿಂದ ಈ ಹಬ್ಬವು ಬೀದಿ ಬೀದಿಗಳಲ್ಲಿ ಬಣ್ಣದ ಲೋಕವನ್ನೆ ಸೃಷ್ಟಿಸುತ್ತದೆ; ಆಬಾಲವೃದ್ಧರೂ ಸೇರಿದಂತೆ ಎಲ್ಲರಲ್ಲೂ ಸಂಭ್ರಮದ ಹೊನಲನ್ನು ಹರಿಸುತ್ತದೆ.

Ad Widget . Ad Widget .

ಸದ್ದು-ಗದ್ದಲದಿಂದ ತುಂಬಿದ ಮೆರವಣಿಗೆಗಳು, ಘೋಷಗಳು, ಡೋಲು-ಡಕ್ಕೆಗಳ ಬಡಿಯುವಿಕೆ, ಬಣ್ಣಗಳಲ್ಲಿ ಮುಚ್ಚಿಹೋದ ಮುಖಗಳು, ಹಾದುಹೋಗುವವರ ಮೇಲೆಲ್ಲ ಚಿಮ್ಮಿಸುವ ಬಣ್ಣಬಣ್ಣದ ನೀರಿನ ಕಾರಂಜಿ – ಇಂತಹ ದೃಶ್ಯ ಹೋಳಿಹಬ್ಬದ ಸಂದರ್ಭಗಳಲ್ಲಿ ಭಾರತದ ಉದ್ದಗಲಕ್ಕೂ ಸರ್ವೇಸಾಮಾನ್ಯ. ಬೇರೆ ದೇಶಗಳಲ್ಲೂ ಹಬ್ಬದ ಸಂದರ್ಭದಲ್ಲಿ ಇಂತಹ ಅಮೋದಪ್ರಮೋದದ ದೃಶ್ಯಗಳು ಕಂಡುಬರುತ್ತವೆ. ಅಲ್ಲೆಲ್ಲ ಉನ್ನತ ವರ್ಗದವರು ಹೂವಿನ ಅಲಂಕಾರಗಳನ್ನೂ, ಹಾಡು ಸಂಗೀತಗಳನ್ನೂ, ಸುವಾಸನಾಯುಕ್ತ ನೀರಿನ ಕಾರಂಜಿಯನ್ನು ಚಿಮ್ಮಿಸುವ ಮೂಲಕವೂ ತಮ್ಮ ಅಮೋದಪ್ರಮೋದದ ಖುಷಿಯನ್ನು ಹೆಚ್ಚಿಸಿಕೊಳ್ಳುವುದುಂಟು.

Ad Widget . Ad Widget .

ಕಾಮದಹನ ಎಂದೇ ಕರೆಯಲ್ಪಡುವ ಹೋಳಿ ಹಬ್ಬವನ್ನು ಕವಿ ಹೀಗೆ ವರ್ಣಿಸಿದ್ದಾನೆ. ‘ಧರೆಯೊಳೀ ಹೋಳಿ ಪದಗಳನು ಪೇಳುವೆನು ಹರನಿಂದ ಮಡಿದ ಕಾಮಣ್ಣ’ ಎಂದು ಶಿವನ ಹಣೆಗಣ್ಣಿನಿಂದ ಸುಟ್ಟುಹೋದ ಕಾಮಣ್ಣನ ಕಥೆಯನ್ನು ‘ಶಿವಪುರಾಣ’ ತಿಳಿಸುತ್ತದೆ. ಅಲ್ಲದೆ ಸ್ಕಾಂದಪುರಾಣ, ಕಾಲಿದಾಸನ ಕುಮಾರಸಂಭವ, ಹರಿಹರನ ಗಿರಿಜಾಕಲ್ಯಾಣ, ವಚನಸಾಹಿತ್ಯ, ದಾಸಸಾಹಿತ್ಯಗಳಲ್ಲಿಯೂ ಹೋಳಿಹಬ್ಬದ ಬಗ್ಗೆ ಸಾಕಷ್ಟು ಮಾಹಿತಿಗಳು ದೊರಕುತ್ತವೆ. ಪುರಾಣಗಳಲ್ಲಿ, ಪ್ರಾದೇಶಿಕ ಜಾನಪದ ಕಥೆಗಳಲ್ಲಿ ದೊರಕುವಂತೆ ಈ ಹಬ್ಬದ ದಿನಕ್ಕೆ ಮೂರು ವಿಶೇಷತೆಗಳಿವೆ:

  1. ತಾರಕಾಸುರನ ಉಪಟಳವನ್ನು ಸಹಿಸಿಕೊಳ್ಳಲಾಗದೆ ದೇವತೆಗಳು ಅವನ ಸಂಹಾರಕ್ಕಾಗಿ ಎಲ್ಲ ರೀತಿಯಿಂದ ಪ್ರಯತ್ನ ನಡೆಸಿದರು. ಋಷಿಮುನಿಗಳು ಶಿವಪುತ್ರನಿಂದ ಆತನ ಸಾವು ಸಾಧ್ಯವೆಂದು ತಿಳಿಸಿದಾಗ ಅವರೆಲ್ಲ ಸೇರಿ ಶಿವನಿಗೆ ವಿವಾಹಮಾಡಿಸುವ ಸಂಭ್ರಮದಲ್ಲಿ ತೊಡಗಿಕೊಂಡರು. ಈ ಮಹತ್ಕಾರ್ಯ ಕಾಮದೇವನಿಂದ ಮಾತ್ರ ಸಾಧ್ಯವೆಂದು ನಿರ್ಣಯಿಸಿ, ಆತನಿಗೆ ಆ ಜವಾಬ್ದಾರಿಯನ್ನು ವಹಿಸಿದರು. ಅನಂತರ ಪಾರ್ವತಿಯು ಪೂಜೆ ಮಾಡುತ್ತಿದ್ದಾಗ ತಪೋಮಗ್ನನಾದ ಶಿವನ ಮೇಲೆ ಕಾಮದೇವನು ಪುಷ್ಪಶರಗಳನ್ನು ಹೂಡುತ್ತಾನೆ. ತಪೋಭಂಗವುಂಟಾಗಿದ್ದರಿಂದ ಸಿಟ್ಟುಗೊಂಡ ಶಿವನು ತನ್ನ ಉರಿಗಣ್ಣನ್ನು ತೆರೆದು ಕಾಮನನ್ನು ಸುಡುತ್ತಾನೆ. ಇದರಿಂದ ಶೋಕತಪ್ತಳಾದ ರತಿಯ ಬೇಗುದಿಗೆ ಕರಗಿದ ಪಾರ್ವತಿ ಶಿವನನ್ನು ಕಾಡಿಬೇಡಿ ರತಿಗೆ ಪತಿಭಿಕ್ಷೆ ನೀಡಲು ಪ್ರಾರ್ಥಿಸುತ್ತಾಳೆ. ಅದಕ್ಕೆ ಶಿವನು ಕಾಮದೇವನು ಅನಂಗನಾಗಿ ಬದುಕಲಿ ಎಂದು ಆಶೀರ್ವದಿಸುತ್ತಾನೆ. ಕಾಮನ ಮರುಹುಟ್ಟಿನ ಸಂಕೇತವಾಗಿ ಆಚರಿಸುವ ಹಬ್ಬವೇ ಹೋಳಿಹಬ್ಬ.
  2. ರಾಕ್ಷಸದೊರೆ ಹಿರಣ್ಯಕಶಿಪು ಹಾಗೂ ದೇವತೆಗಳ ನಡುವೆ ನಡೆದ ಸಮರದಲ್ಲಿ ಹಿರಣ್ಯಕಶಿಪು ಜಯಶಾಲಿಯಾಗಿ ಗರ್ವಿಯಾದ. ತನ್ನನ್ನು ಬಿಟ್ಟು ಬೇರಾವ ದೇವರನ್ನೂ ಮುಂದೆ ಪೂಜಿಸಬಾರದೆಂದೂ, ಒಂದುವೇಳೆ ಯಾರಾದರೂ ಈ ನಿಯಮವನ್ನು ಉಲ್ಲಂಘಿಸಿದರೆ ಅಂಥವರಿಗೆ ಶಿಕ್ಷೆ ನೀಡುವುದಾಗಿಯೂ ಆಜ್ಞೆ ಹೊರಡಿಸಿದ. ಆತನ ಮಗ ಪ್ರಹ್ಲಾದ ಪರಮ ಹರಿಭಕ್ತನಾದ್ದರಿಂದ ತಂದೆಯ ಆಜ್ಞೆ ಮೀರಿ ಹರಿಯನ್ನು ಪೂಜಿಸತೊಡಗಿದ. ಇದನ್ನು ತಿಳಿದ ಹಿರಣ್ಯಕಶಿಪು ಮಗನಿಗೆ ವಿವಿಧ ರೀತಿಯ ಘೋರಶಿಕ್ಷೆ ವಿಧಿಸಿದ. ಅವುಗಳಿಂದ ಏನೂ ಪ್ರಯೋಜನ ಆಗಲಿಲ್ಲ. ಆಗ ಆತ ತನ್ನ ತಂಗಿ ಹೋಲಿಕಳ (ಈಕೆ ದುಷ್ಟರನ್ನು ಬೆಂಕಿಯಿಂದ ಸುಡುವ ಶಕ್ತಿ ಪಡೆದಿದ್ದಳು) ಬಳಿಗೆ ಬಂದು ಪ್ರಹ್ಲಾದನನ್ನು ಸುಟ್ಟುಹಾಕುವಂತೆ ಆಜ್ಞಾಪಿಸಿದ. ಹೋಲಿಕಳು ಅಗ್ನಿಯನ್ನು ಸೃಷ್ಟಿಸಿಕೊಂಡು ಪ್ರಹ್ಲಾದನನ್ನು ಸುಡಲು ತನ್ನ ತೊಡೆಯ ಮೇಲೆ ಕೂರಿಸಿಕೊಂಡಾಗ, ತಾನೇ ಸುಟ್ಟು ಬೂದಿಯಾದಳು. ದುಷ್ಟ ರಾಕ್ಷಸಿಯು ತನ್ನ ಪಾಪಕರ್ಮಕ್ಕೆ ತಕ್ಕ ಫಲ ಅನುಭವಿಸಿ ಸತ್ಪುರುಷನ ರಕ್ಷಣೆಯಾದುದನ್ನು ನೆನಪಿಸಿಕೊಳ್ಳುವುದೇ ಈ ಕಟ್ಟಿಗೆ ಹಾಕಿ ಸುಡುವ ಹೋಳಿಹಬ್ಬದ ಆಚರಣೆಗೆ ಮೂಲಪ್ರೇರಣೆ.
  3. ಪೃಥು ಅಥವಾ ರಘು ಎಂಬ ರಾಜನ ಕಾಲದಲ್ಲಿ ಶಿವನಿಂದ ವರವನ್ನು ಪಡೆದು ಶಿಶುಹತ್ಯೆ ಮಾಡುತ್ತ, ಮಕ್ಕಳಿಗೆ ಕಂಟಕಪ್ರಾಯಳಾಗಿದ್ದ, ಮಾಲೀ ಎಂಬ ರಾಕ್ಷಸರಾಜನ ಪುತ್ರಿ ‘ಢುಂಢಾ’ ಎಂಬ ರಾಕ್ಷಸಿಯ ಉಪಟಳವು ಕೊನೆಗೊಂಡದ್ದು ಇದೇ ದಿನ. ಫಾಲ್ಗುಣ ಪೂರ್ಣಿಮೆಯಂದು ರಾಜ ಪೃಥುವಿನ ಆಜ್ಞೆಯಂತೆ ದೇಶದ ಎಲ್ಲ ಬಾಲಕರು ಹುಚ್ಚುಹುಚ್ಚಾಗಿ ಕುಣಿಯುತ್ತಾ ಕೂಗುತ್ತಾ ಸೌದೆ, ಕಸ, ಕಡ್ಡಿ, ಬೆರಣಿಗಳನ್ನು ಸೇರಿಸಿ ಬೆಂಕಿಹಚ್ಚಿದಾಗ ರಾಕ್ಷಸಿಯು ಭಯಗ್ರಸ್ತಳಾಗಿ ಮನುಷ್ಯಲೋಕವನ್ನೆ ತ್ಯಜಿಸಿ ಓಡಿಹೋದಳು. ಅದರ ನೆನಪಿಗಾಗಿ ಹೋಳಿಹಬ್ಬದ ದಿನದಂದು ಸೌದೆ, ಕಸ, ಕಡ್ಡಿ, ಬೆರಣಿಗಳನ್ನೆಲ್ಲ ಸೇರಿಸಿ ಸುಡುವುದು ರೂಢಿ.

ಮಾಗಿಯ ಚಳಿಯಿಂದ ಮುದುಡಿದ್ದ ಪ್ರಕೃತಿ ಮೆಲ್ಲಮೆಲ್ಲನೆ ಅರಳಿ ನಿಲ್ಲುವ ಕಾಲ. ಕೆಂದಳಿರಿನಿಂದ ಸಿಂಗರಿತಗೊಂಡ ವನರಾಜಿ. ರಸ್ತೆಯ ಇಕ್ಕೆಲಗಳಲ್ಲಿ ಚದುರಿಬಿದ್ದ ಹೂಪಕಳೆಗಳ ರಾಶಿ ರಾಶಿ. ಮರಗಿಡಗಳ ಕೊರಳುಗಳಿಂದ ಹೊರಹೊಮ್ಮುವ ಕೋಗಿಲೆ-ಕಾಜಾಣಗಳ ಇಂಪಾದ ಸಂಗೀತ. ಋುತುಗಳ ರಾಜ ವಸಂತನ ಸ್ವಾಗತಕ್ಕೆ ನಿಸರ್ಗದೇವತೆ ಇಷ್ಟಾದರೂ ಸಿದ್ಧತೆ ಮಾಡಿಕೊಳ್ಳದಿದ್ದರೆ ಹೇಗೆ? ಸಗ್ಗದ ಬಾಗಿಲು ಅಲ್ಲಿ ಹುದಣ್ಣ! ನುಗ್ಗಿದರಲ್ಲೆ ತೆರೆಯುವುದಣ್ಣ! ಹಕ್ಕಿಯ ಟುವ್ವಿಯೊಳವಿತಿದೆಯಣ್ಣ, ಹೂವಿನ ಬಣ್ಣದೊಳಡಗಿದೆಯಣ್ಣ ಎಂದು ಕವಿ ಕುವೆಂಪು ಬಣ್ಣಿಸಿರುವುದು ಎಷ್ಟೊಂದು ಸಹಜವಾಗಿದೆ.

ಪ್ರಕೃತಿಯಲ್ಲಿ ಸಂಭ್ರಮ ತುಂಬಿದಾಗ ಸಹಜವಾಗಿಯೇ ಅದು ಜನಜೀವನದಲ್ಲೂ ಪ್ರತಿಫಲಿಸಬೇಕು. ಆಗಲೇ ನಿಸರ್ಗದ ನಲಿವು ಜನಪದರ ಒಲವಾಗಿ ಮಾರ್ಪಡುತ್ತದೆ. ಕಹಿನೆನಪುಗಳ ನಿಟ್ಟುಸಿರು ವಸಂತನನ್ನು ಹಿಂಬಾಲಿಸುವ ಮಂದಮಾರುತನ ಅಲೆಯಲೆಗಳಲ್ಲಿ ಸೇರಿ ಮರೆಯಾಗಿಬಿಡುತ್ತದೆ. ಕೊನೆಯಲ್ಲಿ ಉಳಿಯುವುದು ಮಧುರ ಭಾವಗಳು ಮಾತ್ರ. ಕೆಟ್ಟದ್ದನ್ನು ಸುಟ್ಟು ಇಷ್ಟವಾದದ್ದನ್ನು ಮೂಟೆಕಟ್ಟುವ ಒಟ್ಟಂದದ ಹಬ್ಬವಲ್ಲವೇ ಹೋಳಿ?

ಅಂತೂ ಹೋಳಿ ಎಂದರೆ ಎಲ್ಲವೂ ಅಂತಿಮವಾಗಿ ಸಂಕೇತಿಸುವುದು ದುಷ್ಟಶಕ್ತಿಗಳೆದುರು ಒಳ್ಳೆಯತನದ ಗೆಲುವನ್ನು; ಮುರಿದ ಸಂಬಂಧಗಳ ಮರುಬೆಸುಗೆಯನ್ನು; ತಪ್ಪುಗಳನ್ನೆಲ್ಲ ಮರೆತು ಒಪ್ಪುಗಳನ್ನಷ್ಟೇ ಅಪ್ಪಿಕೊಳ್ಳುವ ಉದಾರತೆಯನ್ನು; ಹೊಸ ಭರವಸೆಯೊಂದಿಗೆ ಬದುಕಿನ ನೂತನ ಅಧ್ಯಾಯದ ಆರಂಭವನ್ನು. ಮಾರ್ಗ ಹೇಗೆಯೇ ಇರಲಿ, ಕೊನೆಯಲ್ಲಿ ತಲುಪುವ ಗಮ್ಯ ರಮ್ಯವಾಗಿರುತ್ತದೆ ಎಂಬ ವಿಶ್ವಾಸವೇ ತಾನೇ ನಾವೆಲ್ಲ ನಾಳೆಯ ಬೆಳಗನ್ನು ಕಾಯುವಂತೆ ಮಾಡುವುದು?

ವರ್ಷಗಳು ಉರುಳಿದಂತೆ ಪ್ರಪಂಚದೆಲ್ಲೆಡೆ ಹೋಳಿಯ ಜನಪ್ರಿಯತೆ ವ್ಯಾಪಿಸುತ್ತಲೇ ಇದೆ. ನಮ್ಮ ನೆಲದ ಬಣ್ಣಗಳು ಬೆಳೆಯುತ್ತಲೇ ಇರಲಿ, ಅದು ಸಂತೋಷದ ವಿಷಯವೇ. ಬಣ್ಣಗಳೆಷ್ಟೇ ಇದ್ದರೂ ಅಂತಿಮವಾಗಿ ಎಲ್ಲವೂ ಒಂದೇ ಬಣ್ಣ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

Leave a Comment

Your email address will not be published. Required fields are marked *