ಸಮಗ್ರ ನ್ಯೂಸ್: ಬಿಹಾರದಲ್ಲಿ ಪ್ರಧಾನಿ ಮೋದಿ ಆಗಮನ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಟ್ವಾಳ ತಾಲೂಕಿನ ನಂದಾವರದಲ್ಲಿ ದಿಢೀರ್ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದಾರೆ.
ನಾಲ್ಕು ತಂಡಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು ವಿಧ್ವಂಸಕ ಕೃತ್ಯಕ್ಕೆ ಹಣಕಾಸು ನೆರವು ಒದಗಿಸಿದ ಆರೋಪದಲ್ಲಿ ಐವರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ನಂದಾವರದ ಮಹಮ್ಮದ್ ಸಿನಾನ್, ಇಕ್ಬಾಲ್, ಸರ್ಪಾಜ್ ನವಾಜ್ ಮತ್ತು ನೌಫಲ್ ಎಂಬವರ ಮನೆಗೆ ದಾಳಿ ನಡೆಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಇವರು ಹಲವರ ಬ್ಯಾಂಕ್ ಖಾತೆಗಳಿಗೆ ನಿರಂತರ ಹಣ ರವಾನೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ. ಇವರ ಬ್ಯಾಂಕ್ ವ್ಯವಹಾರದ ಮೇಲೆ ಹಲವು ಸಮಯದಿಂದ ಅಧಿಕಾರಿಗಳು ಕಣ್ಣಿಟ್ಟಿದ್ದರು. ಇದೇ ವೇಳೆ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕಳೆದ 2022ರ ಜುಲೈ 12ರಂದು ಬಿಹಾರದ ಪಾಟ್ನಾಕ್ಕೆ ಪ್ರಧಾನಿ ಭೇಟಿ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಪ್ಲಾನ್ ರೂಪಿಸಲಾಗಿತ್ತು. ಪಾಟ್ನಾದ ಫುಲ್ವಾರಿ ಶರೀಫ್ ಎಂಬಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ಒಟ್ಟು ಸೇರಿದ್ದು ಶಸ್ತ್ರಾಸ್ತ್ರ ತರಬೇತಿ ನಡೆಸುತ್ತಿದ್ದುದು ಪತ್ತೆಯಾಗಿತ್ತು. ಅಲ್ಲದೆ, 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡಬೇಕೆಂಬ ಕರಪತ್ರಗಳು, ಪುಸ್ತಕಗಳು ದೊರಕಿದ್ದವು. ಪ್ರಕರಣದಲ್ಲಿ ಬಿಹಾರ ಸೇರಿ ದೇಶದ ಹಲವು ಕಡೆ ದಾಳಿ ನಡೆಸಿರುವ ಅಧಿಕಾರಿಗಳು ಹಲವರನ್ನು ಅರೆಸ್ಟ್ ಮಾಡಿದ್ದಾರೆ.
ಕಳೆದ ಬಾರಿ ಮಂಗಳೂರಿನ ಎಸ್ಡಿಪಿಐ ನಾಯಕ ರಿಯಾಜ್ ಪರಂಗಿಪೇಟೆ ಅವರನ್ನೂ ಇದೇ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.