ಸಮಗ್ರ ನ್ಯೂಸ್: ‘ದೇಶದಲ್ಲಿ ಕಳೆದ ಎರಡು-ಮೂರು ತಿಂಗಳಿಂದ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಕೆಮ್ಮು ಮತ್ತು ಜ್ವರಕ್ಕೆ ಇನ್ಫ್ಲುಯೆಂಜಾ ಎ ಸಬ್ಟೈಪ್ ಎಚ್3ಎನ್2 ಕಾರಣವಾಗಿದ್ದು, ಆಯಂಟಿ ಬಯೋಟಿಕ್ಗಳನ್ನು ವಿವೇಚನೆಯಿಲ್ಲದೇ ಬಳಸಬಾರದು’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ತಜ್ಞರು ಹೇಳಿದ್ದಾರೆ.
ಕೆಮ್ಮು, ತೀವ್ರಶೀತ, ಜ್ವರದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಜನರು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ ಎಂದು ತಿಳಿಸಿರುವ ಐಸಿಎಂಆರ್ ತಜ್ಞರು, ವೈರಸ್ನಿಂದ ಹರಡುತ್ತಿರುವ ಈ ಕಾಯಿಲೆಗಳ ಲಕ್ಷಣಗಳ ಕುರಿತು ವೈರಸ್ ಸಂಶೋಧನೆ ಮತ್ತು ಡಯಾಗ್ನೊಸ್ಟಿಕ್ ಪ್ರಯೋಗಾಲಯ ಮೂಲಕ ನಿಗಾ ವಹಿಸಿರುವುದಾಗಿಯೂ ಹೇಳಿದ್ದಾರೆ.
ವೈರಸ್ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜನರು ಅನುಸರಿಸಬೇಕಾದ ಮತ್ತು ಮಾಡಬಾರದ ಪಟ್ಟಿಯೊಂದನ್ನು ಸಹ ತಜ್ಞರು ಸೂಚಿಸಿದ್ದಾರೆ.
ವಾಯುಮಾಲಿನ್ಯದ ಕಾರಣದಿಂದಾಗಿ ವೈರಲ್ ಪ್ರಕರಣಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ 15 ವರ್ಷ ವಯಸ್ಸಿಗಿಂತ ಕೆಳಗಿನವರು ಹಾಗೂ 50 ವರ್ಷ ವಯಸ್ಸಿನ ಮೇಲ್ಪಟ್ಟವರಲ್ಲಿ ಜ್ವರದ ಜತೆಗೆ ಉಸಿರಾಟದ ಸೋಂಕು ಕಂಡುಬರುತ್ತಿದೆ ಎಂದೂ ಐಎಂಎ ತಿಳಿಸಿದೆ.
‘ರೋಗಿಗಳಿಗೆ ರೋಗಲಕ್ಷಣದ ಚಿಕಿತ್ಸೆಯನ್ನು ಮಾತ್ರ ನೀಡಬೇಕು. ಆ್ಯಂಟಿಬಯೋಟಿಕ್ಗಳನ್ನು ನೀಡಬಾರದು’ ಎಂದೂ ವೈದ್ಯರಿಗೆ ಐಎಂಎ ಸೂಚಿಸಿದೆ.
‘ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಜನರು ಆಜಿಥ್ರೋಮೈಸಿನ್ ಮತ್ತು ಅಮೋಕ್ಸಿಕ್ಲಾವ್ ಮೊದಲಾದ ಆಯಂಟಿಬಯೋಟಿಕ್ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಅದೂ ವೈದ್ಯರ ಸಲಹೆ ಇಲ್ಲದೇ ಸೇವಿಸುತ್ತಾರೆ. ಕಾಯಿಲೆಯಿಂದ ಸ್ವಲ್ಪ ನಿರಾಳವಾದ ಬಳಿಕ ಅವುಗಳ ಸೇವನೆಯನ್ನು ನಿಲ್ಲಿಸುತ್ತಾರೆ. ಇದು ಆಯಂಟಿಬಯೋಟಿಕ್ಗಳ ಪ್ರತಿರೋಧಕತೆಗೆ ಕಾರಣವಾಗುತ್ತದೆ. ನಿಜವಾಗಿಯೂ ಆಯಂಟಿ ಬಯೋಟಿಕ್ಗಳ ಅವಶ್ಯಕತೆ ಯಾವಾಗ ಇರುತ್ತದೆಯೋ ಆಗ ಅವುಗಳು ಕೆಲಸ ಮಾಡುವುದಿಲ್ಲ’ ಎಂದೂ ಐಎಂಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸೋಂಕು ಹರಡದಂತೆ ಏನು ಮಾಡಬೇಕು, ಏನು ಮಾಡಬಾರದು:
*ಕೈಗಳನ್ನು ಸಾಬೂನು ಬಳಸಿ ಚೆನ್ನಾಗಿ ತೊಳೆದುಕೊಳ್ಳಿ.
- ಮಾಸ್ಕ್ ಧರಿಸಿ, ಜನಸಂದಣಿ ಪ್ರದೇಶದಿಂದ ದೂರವಿರಿ.
- ಕೆಮ್ಮುವಾಗ, ಸೀನುವಾಗ ಮುಖವನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಿ.
- ದ್ರವ ಆಹಾರವನ್ನು ಹೆಚ್ಚು ಸೇವಿಸಿ.
- ಮೂಗು ಮತ್ತು ಕಣ್ಣುಗಳನ್ನು ಮುಟ್ಟಿಕೊಳ್ಳಬೇಡಿ.
- ಜ್ವರ ಮತ್ತು ಮೈಕೈ ನೋವಿದ್ದರೆ ಪ್ಯಾರಾಸಿಟಮಲ್ ಮಾತ್ರೆ ತೆಗೆದುಕೊಳ್ಳಿ
ಏನು ಮಾಡಬಾರದು?
- ಯಾರೊಂದಿಗೂ ಹಸ್ತಲಾಘವ ಮಾಡದಿರಿ.
- ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ.
- ವೈದ್ಯರ ಸಲಹೆ ಇಲ್ಲದೇ ಆಯಂಟಿ ಬಯೋಟಿಕ್ ಮತ್ತು ಇತರ ಔಷಧಿಯನ್ನು ತೆಗೆದುಕೊಳ್ಳಬೇಡಿ.
- ಇತರರೊಂದಿಗೆ ಒಟ್ಟಿಗೆ ಕುಳಿತು ಊಟ ಮಾಡಬೇಡಿ.