Ad Widget .

ಕನ್ನಡಿಗರ ಅಸ್ಮಿತೆಗೆ ಕೊಡಲಿಯೇಟು| ಭದ್ರಾವತಿಯ ಉಕ್ಕಿನ ಕಾರ್ಖಾನೆ ಅಭದ್ರ| ಕನ್ನಡಿಗರೇ ಸ್ಥಾಪಿಸಿದ ಸಂಸ್ಥೆಗೆ ಬೀಗ ಜಡಿದ ಬಿಜೆಪಿ

ಸಮಗ್ರ ನ್ಯೂಸ್: ಬಿಜೆಪಿಯ ಆತ್ಮನಿರ್ಭರ್ ಎಂಬುದು, ಇರುವುದನ್ನೆಲ್ಲ ಖಾಸಗಿಯವರಿಗೆ ಮಾರುವುದು, ಖಾಸಗಿಯವರಿಗೂ ಬೇಡವಾದರೆ ಮುಚ್ಚುವುದು ಎನ್ನುವಲ್ಲಿಗೆ ಬಂದು ಮುಟ್ಟಿದೆ. ಅಚ್ಛೇ ದಿನ್ ಎಂದು ಭ್ರಮೆ ಹುಟ್ಟಿಸಿದ್ದವರು ತಂದಿಡುತ್ತಿರುವುದು ಮಾತ್ರ ಕರಾಳ ದಿನಗಳು ಎಂಬುದಕ್ಕೆ ವಿಐಎಸ್‌ಎಲ್ಗೆ ಬೀಗ ಹಾಕುತ್ತಿರುವುದೂ ಮತ್ತೊಂದು ಸಾಕ್ಷಿ.

Ad Widget . Ad Widget .

ಮೊನ್ನೆಯಷ್ಟೇ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಬಂದಿಳಿಯಿತು. ಬಿಜೆಪಿ ಸರಕಾರ ತನ್ನ ಬೆನ್ನು ತಾನೇ ತಟ್ಟಿಕೊಂಡಿತು. ಇದು ಡಬಲ್ ಇಂಜಿನ್ ಸರಕಾರದ ಕ್ರಾಂತಿ ಎಂದು ಹಾಡಿಹೊಗಳಲಾಯಿತು. ಆದರೆ, ಅದೇ ಮಲೆನಾಡಿನ ನೆಲದ ಹಮ್ಮೆಯಾಗಿದ್ದ, ಕರ್ನಾಟಕ ಕೈಗಾರಿಕಾ ರಂಗದ ಭವ್ಯ ಸಂಕೇತವಾಗಿದ್ದ, ಸಾವಿರಾರು ಕುಟುಂಬಗಳಿಗೆ ಅನ್ನ ನೀಡಿದ್ದ ಭದ್ರಾವತಿ ಕಬ್ಬಿಣ ಉಕ್ಕು ಕಾರ್ಖಾನೆ ಮುಚ್ಚಿಹೋಗುತ್ತಿರುವುದರ ಬಗ್ಗೆ ಇದೇ ಡಬಲ್ ಇಂಜಿನ್ ಸರಕಾರದ ಯಾವ ನಾಯಕರಿಗೂ ಕಿಂಚಿತ್ತೂ ಕಳವಳ, ಕಳಕಳಿ ಇದ್ದ ಹಾಗಿರಲಿಲ್ಲ. ಭದ್ರಾವತಿಯಲ್ಲಿ ಹಲವಾರು ವರ್ಷಗಳ ಇತಿಹಾಸವಿದ್ದ ಕಾರ್ಖಾನೆ ಮುಚ್ಚಿಹೋಗುತ್ತಿರುವುದೂ ಇವರ ಡಬಲ್ ಇಂಜಿನ್ ಸರಕಾರದ ಕ್ರಾಂತಿಯೇ ಎಂದು ಕೇಳಬೇಕಾಗಿದೆ.

Ad Widget . Ad Widget .

105 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ವಿಐಎಸ್‌ಎಲ್ ಅನ್ನು ಮುಚ್ಚಲಾಗುತ್ತಿದೆ. ಸರಕಾರಕ್ಕೆ ಈ ಕಾರ್ಖಾನೆ ಬೇಡವಾಗಿ ಬಹಳ ಸಮಯವೇ ಆಯಿತು. ಅದರ ಪುನಶ್ಚೇತನಕ್ಕೆ ಮನಸ್ಸು ಮಾಡದೆ ಕೂತಾಗಲೇ, ಕಾರ್ಖಾನೆಗೆ ಬೀಗ ಬೀಳುವ ಸುಳಿವು ಇತ್ತು. ಈಗ ಅದೇ ನಿಜವಾಗಿದೆ.

ತನ್ನ ಒಂದು ಘಟಕವಾಗಿದ್ದ ಭದ್ರಾವತಿ ಕಬ್ಬಿಣ ಉಕ್ಕು ಕಾರ್ಖಾನೆ ಯನ್ನು ಮುಚ್ಚುವ ನಿರ್ಧಾರವನ್ನು ಭಾರತ ಉಕ್ಕು ಪ್ರಾಧಿಕಾರ (ಎಸ್‌ಎಐಎಲ್) ಈ ವರ್ಷ ಜನವರಿ 18ರಂದು ತೆಗೆದುಕೊಂಡಿತು. ಬಳಿಕ, ಫೆಬ್ರವರಿ 13ರಂದು ಅದನ್ನು ಅಧಿಕೃತವಾಗಿ ಕೇಂದ್ರ ಸರಕಾರ ಸಂಸತ್ತಿನಲ್ಲಿ ಪ್ರಕಟಿಸಿದೆ.

ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಉತ್ತಮ ಗುಣಮಟ್ಟದ ಮಿಶ್ರ ಲೋಹ ಮತ್ತು ವಿಶೇಷ ಉಕ್ಕು, ಕಚ್ಚಾ ಕಬ್ಬಿಣದ ಉತ್ಪಾದನೆಗೆ ನಾಂದಿ ಹಾಡಿದ್ದ ಮಹತ್ವಾಕಾಂಕ್ಷೆಯ ಔದ್ಯಮಿಕ ಯಶೋಗಾಥೆಯೊಂದನ್ನು ಈಗ ಕೇಂದ್ರ ಸರಕಾರ ವಿಐಎಸ್‌ಎಲ್ ಮುಚ್ಚುವುದರೊಂದಿಗೆ ಕೊನೆಗೊಳಿಸುತ್ತಿದೆ.

ಕೇಂದ್ರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಬಿ.ಎಸ್. ಯಡಿಯೂರಪ್ಪ, ಇದು ನಮ್ಮ ಕೈಮೀರಿದ್ದಾಗಿದೆ ಎಂದಿದ್ದಾರೆ. ಬಳಿಕ ಅಧಿವೇಶನದಲ್ಲಿ ಇದನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಒತ್ತಾಯಿಸುತ್ತಾರೆ. ಅದಕ್ಕೆ ಉತ್ತರವಾಗಿ ಸಿಎಂ ಕಾರ್ಖಾನೆ ಉಳಿಸಿಕೊಳ್ಳಲು ಯತ್ನಿಸಲಾಗು ವುದು ಎನ್ನುತ್ತಾರೆ. ಅದನ್ನು ಮಾಧ್ಯಮಗಳು ಬಿಜೆಪಿ ಸರಕಾರದಿಂದ ಗುಡ್ನ್ಯೂಸ್ ಎಂದು ಬರೆಯುತ್ತವೆ. ಪ್ರತೀ ಬಾರಿ ಚುನಾವಣೆ ಹೊತ್ತಿನಲ್ಲಿಯೂ ಕಾರ್ಖಾನೆ ಉಳಿಸುವ ಮಾತನಾಡುತ್ತಲೇ ಬಂದಿದ್ದವರು ಈಗ ಕಾರ್ಖಾನೆ ಮುಚ್ಚುವ ನಿರ್ಧಾರ ಹೊರಬಿದ್ದ ಮೇಲೂ ಅದನ್ನೇ ಹೇಳುತ್ತ ಯಾರ ಕಿವಿಯ ಮೇಲೆ ಹೂವಿಡುತ್ತಿದ್ದಾರೊ ಗೊತ್ತಿಲ್ಲ. ಮಾಧ್ಯಮಗಳಿಗಂತೂ ಕಿಂಚಿತ್ ವಿವೇಕವಿಲ್ಲ. ಬಹುಪರಾಕ್ ಹೇಳುವ ಒಂದೇ ಒಂದು ಅವಕಾಶ ಬಿಡದ ಅವುಗಳು ಕೇಳಬೇಕಾದ ಒಂದು ಪ್ರಶ್ನೆಯನ್ನೂ ಕೇಳುವುದಿಲ್ಲ.

Leave a Comment

Your email address will not be published. Required fields are marked *