ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 11ರಂದು ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯನ್ನು ಲೋಕಾರ್ಪಣೆಗೊಳಿಸಲಿದ್ದು, ಅದಕ್ಕೂ ಮುನ್ನವೇ ಅಂದರೆ ನಾಳೆ(ಫೆ.28)ಯಿಂದಲೇ ಟೋಲ್ ಶುಲ್ಕ ವಿಧಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಟೋಲ್ ದರ ಕುರಿತಂತೆ ಆದೇಶ ಹೊರಡಿಸಲಾಗಿದ್ದು, ಇದು ಬಲು ದುಬಾರಿಯಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿರುವ ಬೆಂಗಳೂರು ನಗರ ಜಿಲ್ಲೆಯ ಕಣಿಮಿಣಿಕೆ ಗ್ರಾಮದ ಸಮೀಪ ಕಿ.ಮೀ.23.900 ಮತ್ತು ರಾಮನಗರ ಜಿಲ್ಲೆಯ ಶೇಷಗಿರಿ ಹಳ್ಳಿ ಗ್ರಾಮದ ಸಮೀಪ ಕಿ.ಮೀ. 26.800 ರಾಷ್ಟ್ರೀಯ ಹೆದ್ದಾರಿ 275ರ ಒಟ್ಟು 55.63 ಕಿಲೋಮೀಟರ್ ಉದ್ದದ ರಸ್ತೆಗೆ ಶುಲ್ಕ ವಸೂಲಿ ಮಾಡಲು ನಿರ್ಧರಿಸಲಾಗಿದ್ದು, ಏಕಮುಖ ಸಂಚಾರಕ್ಕೆ ಕಾರು/ಜೀಪು/ವ್ಯಾನುಗಳಿಗೆ 135 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.

ಹಾಗೆಯೇ ಲಘು ವಾಣಿಜ್ಯ ವಾಹನಗಳು/ಲಘು ಸರಕು ವಾಹನಗಳು/ಮಿನಿ ಬಸ್ ಗಳಿಗೆ 220 ರೂಪಾಯಿ, ಬಸ್ ಅಥವಾ ಟ್ರಕ್ (ಎರಡು ಎಕ್ಸೆಲ್ಗಳದ್ದು) 460 ರೂಪಾಯಿ, 3 ಎಕ್ಸೆಲ್ ವಾಣಿಜ್ಯ ವಾಹನಗಳಿಗೆ 500 ರೂಪಾಯಿ, ಭಾರಿ ನಿರ್ಮಾಣ ಯಂತ್ರಗಳು (ಹೆಚ್.ಸಿ.ಎಂ.) ಅಥವಾ ಭೂ ಅಗೆತದ ಸಾಧನೆಗಳು (ಇಎಂಇ) ಅಥವಾ ಬಹು ಎಕ್ಸೆಲ್ ವಾಹನ (ನಾಲ್ಕರಿಂದ ಆರು ಎಕ್ಸೆಲ್ಗಳದ್ದು) 720 ರೂಪಾಯಿ ಹಾಗೂ ಅತಿಗಾತ್ರದ ಅಳತೆಯ ವಾಹನಗಳು (7 ಅಥವಾ ಅದಕ್ಕೂ ಹೆಚ್ಚಿನ ಸಂಖ್ಯೆ ಎಕ್ಸೆಲ್ಗಳದ್ದು) 880 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.

ಭಾನುವಾರದಿಂದಲೇ ಈ ರಸ್ತೆಯಲ್ಲಿ ಟೋಲ್ ಶುಲ್ಕ ವಿಧಿಸಲು ದಿನಾಂಕ ನಿಗದಿಪಡಿಸಲಾಗಿತ್ತಾದರೂ ಹೆದ್ದಾರಿಯಲ್ಲಿ ಮಾಹಿತಿ ಫಲಕ ಅಳವಡಿಸದ ಕಾರಣ ಇದನ್ನು ಎರಡು ದಿನಗಳ ಕಾಲ ಮುಂದೂಡಲಾಗಿತ್ತು. ಹೀಗಾಗಿ ಫೆಬ್ರವರಿ 28ರ ನಾಳೆಯಿಂದ ಟೋಲ್ ಶುಲ್ಕದ ಹೊರೆ ವಾಹನ ಸವಾರರಿಗೆ ಬೀಳಲಿದೆ. ಇದು ಭಾರಿ ದುಬಾರಿಯಾಗಿದೆ ಎಂಬ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.