ಸಮಗ್ರ ನ್ಯೂಸ್: ಒಂದು ಕಾಡಾನೆಯನ್ನು ಸೆರೆ ಹಿಡಿದ ಬಳಿಕ ಉಳಿದ ಆನೆಗಳನ್ನು ಸೆರೆ ಹಿಡಿಯುವಂತೆ ಆಗ್ರಹಿಸಿ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕಡಬ ತಾಲೂಕಿನ ಕೊಂಬಾರು ಗ್ರಾಮದಲ್ಲಿ ನಡೆದಿದೆ. ಈ ವೇಳೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಜೀಪ್ ಗೆ ಹಾನಿಗೈದಿರುವ ಘಟನೆ ನಡೆದಿದ್ದು ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನರಹಂತಕ ಆನೆಯನ್ನು ಸೆರೆ ಹಿಡಿದು
ಸ್ಥಳಾಂತರಿಸಿದ ನಂತರ ಕಾರ್ಯಾಚರಣೆ ಮುಂದುವರಿಸುವುದಾಗಿ ಅಧಿಕಾರಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು ಎಂದು ತಿಳಿದು ಬಂದಿದೆ. ಸಾರ್ವಜನಿಕರು ಇದಕ್ಕೆ ಒಪ್ಪದೇ ಜನರು ಅಧಿಕಾರಿಗಳ ಜೊತೆಗೆ ವಾಗ್ವಾದ ಮಾಡಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು ಈ ವೇಳೆ ಜನರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಯಾರೋ ಕಿಡಿಗೇಡಿಗಳು
ಇಲಾಖೆಯ ವಾಹನಗಳಿಗೆ ಹಾನಿ ಮಾಡಿ ಅಧಿಕಾರಿಗಳಿಗೆ ಹಲ್ಲೆಗೈದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಗೆ
ಸಂಬಂಧಿಸಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಫೆ.20 ಬೆಳಿಗ್ಗೆ ಕಾಡಾನೆ ದಾಳಿಯಿಂದ ಸ್ಥಳೀಯ ನಿವಾಸಿಗಳಾದ ರಂಜಿತಾ (21) ಮತ್ತು ರಮೇಶ್ ರೈ (52) ಮೃತಪಟ್ಟಿದ್ದರು. ನರಹಂತಕ ಆನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಗಾಗಿ ಮೈಸೂರು ದುಬಾರೆಯಿಂದ 5 ಆನೆಗಳನ್ನು ತಂದು. ಫೆ.21ರಂದು ಕಾರ್ಯಾಚರಣೆ ಆರಂಭಿಸಲಾಗಿತ್ತು. ಫೆ.23ರಂದು (ಗುರುವಾರ) ಕಡಬ ಬಳಿಯ ಮೂಜೂರು ರಕ್ಷಿತಾರಣ್ಯದ ಕೊಂಬಾರು(ಮಂಡೆಕರ) ಎಂಬಲ್ಲಿ ಆನೆಯನ್ನು ಪತ್ತೆ ಹಚ್ಚಿ ಗನ್ ಮೂಲಕ ಆನೆಗೆ ಅರಿವಳಿಕೆ ನೀಡಿ ಸೆರೆ ಹಿಡಿಯಲಾಗಿತ್ತು.
ಹೀಗೆ ಆನೆಯನ್ನು ಹಿಡಿದು ತೆರಳುತ್ತಿದ್ದಾಗ “ನಮ್ಮ ಗ್ರಾಮದ ಕಾಡಿನ ಭಾಗದಲ್ಲಿ ಒಂದಲ್ಲ, ಇಂಥ ಹಲವು ಆನೆಗಳಿವೆ. ಅವೆಲ್ಲವನ್ನೂ ಸೆರೆ ಹಿಡಿಯಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
“ಕಾರ್ಯಾಚರಣೆ ನಿಲ್ಲಿಸಿಲ್ಲ, ನಾಳೆ ಬರುತ್ತೇವೆ” ಎಂದು ಹೇಳಿದರೂ ಕೇಳದೇ ಗ್ರಾಮಸ್ಥರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಎರಡು ಪೊಲೀಸ್ ಜೀಪ್, ಅರಣ್ಯ ಇಲಾಖೆಯ ಒಂದು ಜೀಪ್, ರೇಂಜರ್ ಒಬ್ಬರ ಬೀಝಾ ಗಾಡಿಗಳು ಜಖಂಗೊಂಡಿವೆ. ಡಿವೈಎಸ್ಪಿ ಅವರ ವಾಹನ ಸೇರಿ ಅರಣ್ಯ ಇಲಾಖೆಗೆ ಸೇರಿದ ವಾಹನಗಳ ಗಾಜು ಪುಡಿ ಪುಡಿಯಾಗಿವೆ.