ಸಮಗ್ರ ನ್ಯೂಸ್: ತಮ್ಮ ಮರು ನೇಮಕದ ಪ್ರಕ್ರಿಯೆಯಲ್ಲಿ ವಿಳಂಬ ಧೋರಣೆಯನ್ನು ಖಂಡಿಸಿ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಮಹಿಳಾ ನರ್ಸ್ ನಡುರಸ್ತೆಯಲ್ಲೇ ನಗ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಇಲ್ಲಿನ ಜೆಎಲ್‌ಎನ್ ರಸ್ತೆಯಲ್ಲಿರುವ ಎಸ್‌ಎಂಎಸ್ ವೈದ್ಯಕೀಯ ಕಾಲೇಜು ಮುಂಭಾಗದ ಬುಧವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಈ ನರ್ಸ್ ವಿವಸ್ತ್ರವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಇದನ್ನು ಕಂಡ ದಾರಿಹೋಕರು ಬೆಚ್ಚಿ ಬಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮಹಿಳಾ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿದೆ. ಮಹಿಳೆಗೆ ಬಟ್ಟೆ ಧರಿಸಿ ತನ್ನ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಆದರೆ, ಇದಕ್ಕೆ ನಿರಾಕರಿಸಿದಾಗ ಪೊಲೀಸರು ಕಂಬಳಿಯಲ್ಲಿ ಸುತ್ತಿ ಎಸ್‌ಎಂಎಸ್ ಆಸ್ಪತ್ರೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ನಂತರ ಠಾಣೆಯಲ್ಲಿ ನರ್ಸ್‌ನ ವಿಚಾರಣೆ ನಡೆಸಲಾಗಿದೆ. ಅಜ್ಮೀರ್ ನಿವಾಸಿಯಾದ ಈ ಮಹಿಳೆ ಬೇವಾರದ ಆಸ್ಪತ್ರೆಯಲ್ಲಿ ಸಹಾಯಕಿ ನರ್ಸ್ ಆಗಿ (ಎಎನ್ಎಂ) ಸೇವೆ ಸಲ್ಲಿಸುತ್ತಿದ್ದರು. 2020ರಲ್ಲಿ ವೈದ್ಯರ ದೂರಿನ ಮೇರೆಗೆ ಅಮಾನತುಗೊಳಿಸಲಾಗಿತ್ತು. ಆದರೆ, ತನ್ನ ಮರು ನೇಮಕದಲ್ಲಿ ತೀರ ವಿಳಂಬ ನೀತಿ ಅನುಸರಿಸಲಾಗುತ್ತಿದೆ.
ಈ ಬಗ್ಗೆ ಹಲವು ಬಾರಿ ಆರೋಗ್ಯ ಇಲಾಖೆಯ ಮೇಲಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ರಾಜಧಾನಿಯಲ್ಲಿರುವ ಅಧಿಕಾರಿಗಳ ಕಣ್ಣು ತೆರೆಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಹ ಕಲೆ ಹಾಕಲಾಗುತ್ತಿತ್ತು ಎಂದು ಠಾಣಾಧಿಕಾರಿ ನವರತ್ನ ಧೋಲಿಯಾ ತಿಳಿಸಿದ್ದಾರೆ.