ಸಮಗ್ರ ನ್ಯೂಸ್: ಬಿಲ್ಲವರ ತೀವ್ರ ವಿರೋಧದ ಹಿನ್ನಲೆಯಲ್ಲಿ ಬೆಳ್ತಂಗಡಿಯ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಕ್ಕೆ ರೋಹಿತ್ ಚಕ್ರತೀರ್ಥರನ್ನು ಆಹ್ವಾನಿಸುವ ವಿಚಾರ ಕೈಬಿಟ್ಟಿರುವುದಾಗಿ ಅಳದಂಗಡಿ ಅರಮನೆಯ ಅರಸ ಡಾ.ಪದ್ಮಪ್ರಸಾದ ಅಜಿಲ ಅವರು ಬೆಳ್ತಂಗಡಿ ತಾಲೂಕು ಬಿಲ್ಲವ ಸಮುದಾಯದ ಮುಖಂಡರುಗಳಿಗೆ ಮಾಹಿತಿ ನೀಡಿದ್ದಾರೆನ್ನಲಾಗಿದೆ.
ವಿವಾದಿತ ವ್ಯಕ್ತಿಯನ್ನು ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸುವುದರಿಂದ ಹಿಂದೆ ಸರಿಯಲು ನಿರ್ಧರಿಸಿದ ಡಾ.ಪದ್ಮಪ್ರಸಾದ ಅಜಿಲರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಬಿಲ್ಲವ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
ಅಜಿಲ ಸೀಮೆಯ ಪಟ್ಟದ ದೇವರಾದ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲು ರೋಹಿತ್ ಚಕ್ರತೀರ್ಥರನ್ನು ಶಾಸಕ ಹರೀಶ್ ಪೂಂಜಾ ಅಧ್ಯಕ್ಷರಾಗಿರುವ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಆಹ್ವಾನಿಸಿತ್ತು. ಆದರೆ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಹತ್ತನೇ ತರಗತಿ ಪಠ್ಯದಿಂದ ತೆಗೆದು ಹಾಕಿದ ಆರೋಪ ಎದುರಿಸುತ್ತಿರುವ ರೋಹಿತ್ ಚಕ್ರತೀರ್ಥರನ್ನು ದೇವಸ್ಥಾನದ ಕಾರ್ಯಕ್ರಮಕ್ಕೆ ಆಹ್ವಾನಿಸುವ ನಿರ್ಧಾರಕ್ಕೆ ವಿವಿಧ ಬಿಲ್ಲವ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಈ ವಿಚಾರವಾಗಿ ಕೆಲ ದಿನಗಳ ಹಿಂದೆ ಬಿಲ್ಲವ ಸಂಘಟನೆಗಳ ಮುಖಂಡರು ಅಳದಂಗಡಿ ಅರಸ ಡಾ.ಪದ್ಮಪ್ರಸಾದ ಅಜಿಲರನ್ನು ಭೇಟಿಯಾಗಿ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ರೋಹಿತ್ ಕಾರ್ಯಕ್ರಮಕ್ಕೆ ಆಗಮಿಸಿದರೆ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಸಿದ್ದರು.
ಇದೀಗ ಅಳದಂಗಡಿ ಅರಸರು ಮದ್ಯಪ್ರವೇಶಿಸಿ ಎಲ್ಲರೊಂದಿಗೆ ಮಾತುಕತೆ ನಡೆಸಿ ಪ್ರಕರಣವನ್ನು ಸುಖ್ಯಾಂತಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.