ಸಮಗ್ರ ನ್ಯೂಸ್: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ನಡುವಣ ಸಂಘರ್ಷಕ್ಕೆ ಸಂಬಂಧಿಸಿ ಮಹತ್ವದ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರ ಇಬ್ಬರನ್ನೂ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಆದರೆ, ಯಾವ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ ಎಂಬುದನ್ನು ತಿಳಿಸಿಲ್ಲ. ಜತೆಗೆ ಐಎಎಸ್ ಅಧಿಕಾರಿ, ರೂಪಾ ಅವರ ಪತಿ ಮುನೀಶ್ ಮೌದ್ಗಿಲ್ ಅವರನ್ನೂ ವರ್ಗಾವಣೆ ಮಾಡಲಾಗಿದೆ. ಇವರನ್ನು ಡಿಪಿಆರ್ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.
ಕಳೆದ ಕೆಲವು ದಿನಗಳಿಂದ ಇಬ್ಬರು ಅಧಿಕಾರಿಗಳ ನಡುವಣ ಸಂಘರ್ಷ ತಾರಕಕ್ಕೇರಿತ್ತು. ರೋಹಿಣಿ ಸಿಂಧೂರಿ ಅವರು ಜೆಡಿಎಸ್ ಶಾಸಕ ಸಾರಾ ಮಹೇಶ್ ಜತೆ ಸಂಧಾನಕ್ಕೆ ತೆರಳಿದ್ದರು ಎಂಬ ಬಗ್ಗೆ ವರದಿಯಾದ ಬೆನ್ನಲ್ಲೇ ಅವರ ವಿರುದ್ಧ ಡಿ ರೂಪಾ ಆರೋಪಗಳ ಸುರಿಮಳೆಯನ್ನೇ ಮಾಡಿದ್ದರು. ನಂತರ ಪ್ರಕರಣ ರಾಜಕೀಯ ವಲಯದಲ್ಲಿಯೂ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಐಪಿಎಸ್ ಡಿ.ರೂಪಾ ಹಾಗೂ ಐಎಎಸ್ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಉನ್ನತ ಹುದ್ದೆಯ ಅಧಿಕಾರಿಗಳು ಹೀಗೆ ಕಿತ್ತಾಡುವುದು ಸರಿಯಲ್ಲ. ಹೀಗಾಗಿ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮಕೈಗೊಂಡಿದೆ. ಪ್ರಕರಣದ ಬಗ್ಗೆ ಸರ್ಕಾರ ತನಿಖೆ ನಡೆಸಲಿದೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸೋಮವಾರ ವಿಧಾನಸಭೆ ಅಧಿವೇಶನದಲ್ಲಿಯೂ ಐಎಎಸ್ – ಐಪಿಎಸ್ ಅಧಿಕಾರಿಗಳ ನಡುವಣ ಸಂಘರ್ಷದ ಬಗ್ಗೆ ಚರ್ಚೆಯಾಗಿತ್ತು. ಸೋಮವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ವಿಚಾರ ಪ್ರಸ್ತಾಪವಾಗಿತ್ತು. ಇದರ ಬೆನ್ನಲ್ಲೇ ಅಧಿಕಾರಿಗಳಿಬ್ಬರನ್ನೂ ವರ್ಗಾವಣೆ ಅಥವಾ ಕಡ್ಡಾಯ ರಜೆ ಮೇಲೆ ಕಳುಹಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿದ್ದವು. ಇದೀಗ ಸರ್ಕಾರ ಅದೇ ಕ್ರಮ ಕೈಗೊಂಡಿದೆ.