ಸಮಗ್ರ ನ್ಯೂಸ್: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಕರಾವಳಿಯ ಬಹುತೇಕ ಶಿವನ ದೇವಸ್ಥಾನಗಳಲ್ಲಿ ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ, ಶ್ರೀ ಮಂಗಳಾದೇವಿ ಕ್ಷೇತ್ರ, ಶರವು ಶ್ರೀ ಮಹಾಗಣಪತಿ ಕ್ಷೇತ್ರ, ಕಾವೂರು ಶ್ರೀ ಮಹಾಲಿಂಗೇಶ್ವರ ದೇಗುಲ, ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾ ನ ಸೇರಿದಂತೆ ನಗರದ ವಿವಿಧ ಸನ್ನಿಧಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಫೆ. 18ರಂದು ಸಂಜೆ 6ಕ್ಕೆ ದೇವಸ್ಥಾನದ ಎದುರಿನ ಪ್ರವಚನ ಮಂಟಪದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸಿ ಶಿವಪಂಚಾಕ್ಷರಿ ಪಠಣಕ್ಕೆ ಚಾಲನೆ ನೀಡಲಿದ್ದಾರೆ. ರಾತ್ರಿಯಿಂದ ಮುಂಜಾನೆ ವರೆಗೆ ಭಕ್ತರು ಶಿವನಾಮ ಸ್ಮರಣೆ, ಭಜನೆ, ಪ್ರಾರ್ಥನೆ, ಧ್ಯಾನದೊಂದಿಗೆ ಜಾಗರಣೆ ಮಾಡಲಿದ್ದಾರೆ.
ದೇವಸ್ಥಾನದಲ್ಲಿ ಸಂಜೆ 6ರಿಂದ ನಾಲ್ಕು ಜಾವಗಳಲ್ಲಿ ಅಹೋರಾತ್ರಿ ಭಕ್ತರು ಶತರುದ್ರಾಭಿಷೇಕ, ಎಳನೀರು ಅಭಿಷೇಕ ಸೇವೆ ನಡೆಯಲಿದೆ. ರಾತ್ರಿಯಿಡೀ ದೇವರ ದರ್ಶನಕ್ಕೆ ಅವಕಾಶವಿದ್ದು, ರವಿವಾರ ಬೆಳಗ್ಗಿನ ಜಾವ ರಥೋತ್ಸವ ನಡೆಯಲಿದೆ.