ಸಮಗ್ರ ನ್ಯೂಸ್: ಕಳೆದ ಮೂರು ದಿನಗಳಿಂದ ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ ಶುರುವಾಗಿದೆ, ರಫೆಲ್, ಸೂರ್ಯಕಿರಣ್, ಸುಖೋಯ್, ತೇಜಸ್ ಸೇರಿದಂತೆ ದೇಶ ವಿದೇಶಗಳ ಹಲವು ಯುದ್ದ ವಿಮಾನಗಳನ್ನ ನೋಡಿ ಸಾವಿರಾರು ಮಂದಿ ಖುಷಿಪಟ್ಟಿದ್ದಾರೆ. ವೈಮಾನಿಕ ಪ್ರದರ್ಶನದ ಪರಿಣಾಮದಿಂದ ಬಿಲಗಳಿಂದ ಹೊರ ಬಂದಿರುವ ನೂರಾರು ಹಾವುಗಳು ಸಿಕ್ಕ ಸಿಕ್ಕ ಮನೆಗಳಿಗೆ ನುಗ್ಗುತ್ತಿವೆಯಂತೆ.
ಯಲಹಂಕ ಸುತ್ತಮುತ್ತ ಕೇವಲ ಎರಡ್ಮೂರು ದಿನಗಳಲ್ಲಿ ಸುಮಾರು 50 ರಿಂದ 60 ಹಾವುಗಳನ್ನು ಹಿಡಿದಿದ್ದೇನೆ. ನಮ್ಮ ಮನೆಗಳಿಗೆ ಹಾವು ನುಗ್ಗಿದೆ ಬನ್ನಿ ಎಂದು ದಿನನಿತ್ಯ ನೂರಾರು ಕರೆಗಳು ಬರುತ್ತಿವೆ ಎನ್ನುತ್ತಾರೆ ಉರಗ ತಜ್ಞ ಸ್ನೇಕ್ ಶಿವಪ್ಪ.
ಹಾವಿಗೆ ಕಿವಿ ಇಲ್ಲ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಯುದ್ಧ ವಿಮಾನಗಳ ಹಾರಾಟದಿಂದ ಎದುರಾಗುವ ಭೂಮಿಯ ವೈಬ್ರೇಷನ್‍ನಿಂದಾಗಿ ಹಾವುಗಳು ಬಿಲಗಳಿಂದ ಹೊರ ಬಂದು ಅಕ್ಕಪಕ್ಕದ ಮನೆಗಳನ್ನು ಸೇರಿಕೊಳ್ಳುತ್ತಿವೆ ಎಂದು ಶಿವಪ್ಪ ಮಾಹಿತಿ ನೀಡಿದ್ದಾರೆ.
ಮನೆಗಳು ಮಾತ್ರವಲ್ಲದೆ, ತಂಪಾದ ವಾತಾವರಣವಿರುವ ಟಾಯ್ಲೆಟ್‍ಗಳು, ವಾಹನಗಳು, ಮನೆಯ ಮೂಲೆಗಳಿಗೆ ಹಾವುಗಳು ಬಂದು ಸೇರಿಕೊಳ್ಳುತ್ತಿವೆ ಎಂದು ಅವರು ವಿವರಣೆ ನೀಡಿದ್ದಾರೆ. ಒಟ್ಟಾರೆ ಏರ್ ಶೋನಿಂದಾಗಿ ಯಲಹಂಕ ನಿವಾಸಿಗಳಿಗೆ ಆತಂಕ ಉಂಟಾಗಿದ್ದು, ಜಾಗ್ರತೆಯಾಗಿರಬೇಕೆಂಬ ಸಲಹೆ ಬಂದಿದೆ.