ಸಮಗ್ರ ನ್ಯೂಸ್: ಏಕಕಾಲದಲ್ಲಿ ಐದು ಮಕ್ಕಳಿಗೆ ತಾಯಿಯೊಬ್ಬಳು ಜನ್ಮ ನೀಡಿದ ಘಟನೆ ಪೋಲೆಂಡ್‌ನಲ್ಲಿ ನಡೆದಿದೆ. ದಕ್ಷಿಣ ಪೋಲೆಂಡ್‌ನ ಕ್ರಾಕೋವ್‌ನ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಇಂತದ್ದೊಂದು ಅಚ್ಚರಿ ಪವಾಡದಂತಹ ಘಟನೆ ನಡೆದಿದ್ದು, ಪ್ರಸ್ತುತ ಏಳು ಮಕ್ಕಳ ತಾಯಿ ಮತ್ತೆ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಈಗಾಗಲೇ ಏಳು ಮಕ್ಕಳನ್ನು ಹೊಂದಿರುವ 37 ವರ್ಷದ ಡೊಮಿನಿಕಾ ಕ್ಲಾರ್ಕ್ ಎಂಬ ಮಹಿಳೆ ಎಂಟನೇ ಮಗುವನ್ನು ಬಯಸಿ ಗರ್ಭವತಿಯಾಗಿದ್ದರು. ಆದರೆ ಅವರು ಬಯಸಿದ್ದಕ್ಕಿಂತ ಹೆಚ್ಚಾಗಿ ಮಕ್ಕಳನ್ನು ಪಡೆದಿದ್ದಾರೆ. ಸದ್ಯ ಐದು ಮಕ್ಕಳಿಗೆ ಜನ್ಮ ನೀಡಿರುವ ತಾಯಿ ಇದೀಗ ಒಮ್ಮಲೇ ಒಟ್ಟು 12 ಮಕ್ಕಳ ತಾಯಿಯಾಗಿದ್ದಾರೆ.
ಕ್ರಾಕೋವ್‌ನ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ವೈದ್ಯರು ಗರ್ಭಧಾರಣೆಯ 28ನೇ ವಾರದಲ್ಲಿ ಭಾನುವಾರ ಸಿಸೇರಿಯನ್ ಮಾಡುವ ಮೂಲಕ ಐದು ಮಕ್ಕಳನ್ನು ಹೆರಿಗೆ ಮಾಡಿಸಿದ್ದಾರೆ. ಈ ಐದು ಮಕ್ಕಳಲ್ಲಿ ಎರಡು ಗಂಡು ಮತ್ತು ಮೂರು ಹೆಣ್ಣು ಶಿಶುಗಳು ಜನಿಸಿದ್ದಾರೆ. ಈ ಮಕ್ಕಳಿಗೆ ಅರಿಯಾನಾ ಡೈಸಿ, ಚಾರ್ಲ್ಸ್ ಪ್ಯಾಟ್ರಿಕ್, ಎಲಿಜಬೆತ್ ಮೇ, ಇವಾಂಜೆಲಿನ್ ರೋಸ್ ಮತ್ತು ಹೆನ್ರಿ ಜೇಮ್ಸ್ ಎಂದು ನಾಮಕರಣ ಸಹ ಮಾಡಲಾಗಿದೆ.
ಅವಧಿ ಪೂರ್ವವಾಗಿ ಜನಿಸಿದ ಈ ಮಕ್ಕಳು ಕೊಂಚ ಉಸಿರಾಟದ ತೊಂದರೆ ಹೊಂದಿದ್ದು, ಚಿಕಿತ್ಸೆ ಪಡೆಯುತ್ತಿವೆ. ಅದನ್ನು ಹೊರತುಪಡಿಸಿ ಐದು ಶಿಶುಗಳೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸದ್ಯ ಶಿಶುಗಳು 710-1,400 ಗ್ರಾಂ (25-49 ಔನ್ಸ್,) ತೂಕ ಹೊಂದಿದ್ದು, ಇನ್‌ಕ್ಯುಬೇಟರ್‌ಗಳಲ್ಲಿ ಇರಿಸಲಾಗಿದೆ ಎಂದು ನಿಯೋನಾಟಾಲಜಿ ವಿಭಾಗದ ಮುಖ್ಯಸ್ಥ ರಿಸ್ಜಾರ್ಡ್ ಲಾಟರ್‌ಬಾಚ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಡೊಮಿನಿಕಾ ಕ್ಲಾರ್ಕ್ ಪತಿ ವಿನ್ಸ್ “ನಾವು ಎಂಟನೇ ಮಗುವಿನ ನಿರೀಕ್ಷೆಯಲ್ಲಿದ್ದೆವು, ಆದರೆ ದೇವರು ನಮಗೆ ಹೆಚ್ಚಿನ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ” ಎಂದು ವಿನ್ಸ್ ಖುಷಿ ವ್ಯಕ್ತಪಡಿಸಿದ್ದಾರೆ. ತಾಯಿ ಡೊಮಿನಿಕಾ ಕ್ಲಾರ್ಕ್ ಕೂಡ ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು, ತನ್ನ ಗರ್ಭಾವಸ್ಥೆಯನ್ನು ಪವಾಡ ಎಂದು ಕರೆದಿದ್ದಾರೆ.