ಸಮಗ್ರ ನ್ಯೂಸ್: ಕೆಲ ದಿನಗಳ ಹಿಂದೆ ಪಾಂಗಾಳದಲ್ಲಿ ನಡೆದಿದ್ದ ಶರತ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುರತ್ಕಲ್ ಸಮೀಪದ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸುರತ್ಕಲ್ ಸಮೀಪದ ಕುಳಾಯಿ ನಿವಾಸಿಗಳಾದ ದಿನೇಶ್ ಶೆಟ್ಟಿ (20) ಮತ್ತು ಲಿಖಿತ್ ಕುಲಾಲ್ (21), ಆಕಾಶ್ ಕರ್ಕೇರ(24), ಪ್ರಸನ್ನ ಶೆಟ್ಟಿ (40) ಎಂದು ಗುರುತಿಸಲಾಗಿದೆ. ಚರ್ಚೆಯ ನೆಪದಲ್ಲಿ ಶರತ್ ಶೆಟ್ಟಿಯನ್ನು ಪಾಂಗಾಳಕ್ಕೆ ಕರೆದಿದ್ದು, ಬಳಿಕ ಡ್ರ್ಯಾಗರ್ ನಿಂದ ಇರಿದು ಹತ್ಯೆ ಮಾಡಲಾಗಿತ್ತು. ಹತ್ಯೆಯ ಬೆನ್ನಲ್ಲೇ ಹಲವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದ್ದು, ಶರತ್ ಶೆಟ್ಟಿಯ ಹಿನ್ನೆಲೆಯ ಬಗ್ಗೆಯೂ ಪೊಲೀಸರು ಮಾಹಿತಿ ಸಂಗ್ರಹಿಸಿದ್ದರು.
ಬಂಧಿತರ ಪೈಕಿ ದಿನೇಶ್ ಮತ್ತು ಲಿಖಿತ್‌ನನ್ನು ಫೆ.14ರಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಒಂದು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಆಕಾಶ್ ಮತ್ತು ಪ್ರಸನ್ನ ಶೆಟ್ಟಿಯನ್ನು ಫೆ.15ರಂದು ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗುವುದು ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಪ್ರಕರಣದ ಬಳಿಕ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಕಟಪಾಡಿಯ ಯೋಗೀಶ್ ಆಚಾರ್ಯ, ನಾಗರಾಜ್, ಭೂಗತ ಪಾತಕಿ ಕಲಿ ಯೋಗೀಶ್ ಮತ್ತು ಕೃತ್ಯಕ್ಕೆ ಸಹಕರಿಸಿದ ಮುಕೇಶ್ ಹಾಗೂ ಇತರ ಆರೋಪಿಗಳ ಶೋಧ ಕಾರ್ಯ ಮುಂದುವರೆಸಲಾಗಿದೆ.
ಈ ಬಗ್ಗೆ ಮಾತನಾಡಿದ ಉಡುಪಿ ಎಸ್ಪಿ ಅಕ್ಷಯ್ ಹಾಕೆ ಮಚ್ಚಿಂದ್ರ, ಪಾಂಗಾಳದಲ್ಲಿ ಜಾಗದ ತಕರಾರಿಗೆ ಸಂಬಂಧಿಸಿ ಡಿಸೆಂಬರ್ ತಿಂಗಳಲ್ಲಿ ಯೋಗೀಶ್ ಆಚಾರ್ಯ ಹಾಗೂ ಭರತ್ ಶೆಟ್ಟಿ ಹೋಗಿದ್ದು, ಈ ವೇಳೆ ಕೆಲವು ವ್ಯಕ್ತಿಗಳು ಯೋಗೀಶ್ ಆಚಾರ್ಯನಿಗೆ ಹಲ್ಲೆ ನಡೆಸಿದ್ದರು. ಈ ವೇಳೆ ಶರತ್ ಶೆಟ್ಟಿ, ಯೋಗೀಶ್ ಸಹಾಯಕ್ಕೆ ಬಾರದೆ ಸ್ಥಳದಿಂದ ಓಡಿಹೋಗಿದ್ದ. ಇದೇ ದ್ವೇಷದಿಂದ ಯೋಗೀಶ್ ಆಚಾರ್ಯ, ಭೂಗತ ಪಾತಕಿ ಕಲಿ ಯೋಗೀಶನನ್ನು ಸಂಪರ್ಕಿಸಿ ಕೊಲೆಗೆ ಸಂಚು ರೂಪನೀಡದ್ದಾರೆ ಎಂದು ಪ್ರಕರಣದ ಕುರಿತು ವಿವರಣೆ ನೀಡಿದ್ದಾರೆ.