ಸಮಗ್ರ ನ್ಯೂಸ್: ಬೆಂಗಳೂರು ಜಯನಗರದ 9ನೆ ಬ್ಲಾಕ್ ಬಳಿ ಇರುವ ಜೈನ್ ವಿಶ್ವ ವಿದ್ಯಾಲಯದ ಮ್ಯಾನೇಜ್‍ಮೆಂಟ್ ಸ್ಟಡೀಸ್‍ನಲ್ಲಿ ವಿದ್ಯಾರ್ಥಿಗಳು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಪರಿಶಿಷ್ಟ ಜಾತಿ ಸೇರಿದಂತೆ ದಲಿತ ಸಮುದಾಯ ಅವಹೇಳನ ಮಾಡಿದ ವಿವಾದಾತ್ಮಕ ಕಿರು ನಾಟಕ ಪ್ರದರ್ಶಿಸಿದ್ದು, ಈ ಸಂಬಂಧ ಕಾಲೇಜಿನ 7 ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಎಸ್‌ಸಿ, ಎಸ್‌ಟಿ ಆಯಕ್ಟ್ ಹಾಗೂ ಐಪಿಸಿ 153a, 295a, 149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿದ್ದಾಪುರ ಠಾಣೆ ಪೊಲೀಸರು ಮಾಹಿತಿ ನೀಡಿದರು.
ಘಟನೆ ಏನು?
ಕೆಳಜಾತಿಯ ಹಿನ್ನೆಲೆಯ ವ್ಯಕ್ತಿಯೊಬ್ಬ ಮೇಲ್ಜಾತಿ ಮಹಿಳೆಯೊಂದಿಗೆ ಡೇಟಿಂಗ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಪ್ರದರ್ಶಿಸಲಾಗಿದೆ. ಇದೇ ವೇಳೆ ಆತ, ‘ತಾನು ದಲಿತ’ ಎಂದು ಹೇಳಿಕೊಳ್ಳುವ ಸನ್ನಿವೇಶ ಬರುತ್ತದೆ. ಆಗ ‘ಡೋಂಟ್ ಟಚ್ ಮಿ, ಟಚ್ ಮಿ’ ಎಂಬ ಹಾಡನ್ನು ಹಾಕಿರುವುದು ಕಂಡು ಬಂದಿದೆ. ಹಾಗೆಯೇ ಈ ನಾಟಕದಲ್ಲಿ ಬಿ.ಆರ್.ಅಂಬೇಡ್ಕರ್ ಅವರನ್ನು ‘ಬಿಯರ್ ಅಂಬೇಡ್ಕರ್’ ಎಂದು ಅವಹೇಳನ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ದಾಖಲಾಗಿದೆ.
ಕಾಲೇಜು ಉತ್ಸವದಲ್ಲಿ ವಿದ್ಯಾರ್ಥಿಗಳು ಹೀಗೆ ಬಿ.ಆರ್.ಅಂಬೇಡ್ಕರ್ ಮತ್ತು ಪರಿಶಿಷ್ಟ ಜಾತಿ ಸೇರಿದಂತೆ ದಲಿತ ಸಮುದಾಯವನ್ನು ಒಳಗೊಂಡ ವಿವಾದಾತ್ಮಕ ಕಿರು ನಾಟಕವನ್ನು ಪ್ರದರ್ಶಿಸಿದ್ದಾರೆ. ಅಲ್ಲದೇ ದಲಿತರು ಮತ್ತು ಪರಿಶಿಷ್ಟ ಜಾತಿಯ ಬಗ್ಗೆ ವಿವಿಧ ಹಾಸ್ಯಗಳನ್ನು ವಿದ್ಯಾರ್ಥಿಗಳು ಮಾಡಿದ್ದಾರೆ. ಹಾಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗವು ಕಾಲೇಜು ಆಡಳಿತ ಮಂಡಳಿಯ ವಿರುದ್ದ ಸ್ವಯಂ ದೂರು ದಾಖಲಿಸಿಕೊಳ್ಳಲು ದಲಿತ ಮುಂಖಂಡರು ಒತ್ತಾಯಿಸಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.