ಸಮಗ್ರ ನ್ಯೂಸ್: ಚೆಕ್ ಬೌನ್ಸ್‌ಗೆ ಸಂಬಂಧಿಸಿದ ಎಂಟು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಟ್ಟು ₹ 1.36 ಕೋಟಿಗೂ ಹೆಚ್ಚಿನ ಮೊತ್ತವನ್ನು ಫಿರ್ಯಾದುದಾರರಿಗೆ ಪಾವತಿಸುವಂತೆ ಘೋಷಿಸಿದೆ. ಇದಕ್ಕೆ ತಪ್ಪಿದಲ್ಲಿ ಪ್ರತಿ ಪ್ರಕರಣದಲ್ಲಿ ತಲಾ ಆರು ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ.
ಈ ಕುರಿತ ಎಂಟು ಪ್ರತ್ಯೇಕ ಪ್ರಕರಣಗಳ ಮೇಲಿನ ಆದೇಶವನ್ನು ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶೆ ಜೆ.ಪ್ರೀತ್ ಅವರು ಸೋಮವಾರ ಪ್ರಕಟಿಸಿದರು. ಕುಮಾರಸ್ವಾಮಿ ಅವರು ವಿವಿಧ ಪ್ರಕರಣಗಳಲ್ಲಿ ಒಟ್ಟು ₹ 1,38,65,000 ಮೊತ್ತಕ್ಕೆ ಮರುಪಾವತಿಯ ಚೆಕ್ ನೀಡಿದ್ದರು. ಇದರಲ್ಲಿ ₹ 1,36,50,000 ಬಾಕಿ ಉಳಿಸಿಕೊಂಡಿದ್ದರು. ಈ ಕುರಿತಂತೆ ಫಿರ್ಯಾದುಗಳು ಸಲ್ಲಿಕೆಯಾಗಿದ್ದವು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಈ ಆದೇಶ ನೀಡಿದ್ದಾರೆ.