ಸಮಗ್ರ ನ್ಯೂಸ್: ಚಿತ್ರದುರ್ಗದ ಜ್ಯೋತಿರಾಜ್ ಯಾನೆ ಕೋತಿರಾಜ್ ಅವರು ಭಾನುವಾರ (ಫೆ.12) ಎರಡೇ ತಾಸುಗಳಲ್ಲಿ ಬರೀ ಕೈಗಳ ಸಹಾಯದಿಂದ ಗಡಾಯಿಕಲ್ಲು (ಜಮಾಲಾಬಾದ್/ ನರಸಿಂಹಗಡ) ಏರಿ ಸಾಹಸ ಮೆರೆದಿದ್ದಾರೆ.
ಸುರಕ್ಷತೆಯ ದೃಷ್ಟಿಯಿಂದ ಅವರು ಸೊಂಟಕ್ಕೆ ರೋಪ್ ಅಳವಡಿಸಿಕೊಂಡಿದ್ದರು. ಸಮುದ್ರ ಮಟ್ಟದಿಂದ 1700 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲನ್ನು ಮೆಟ್ಟಿಲುಗಳ ಸಹಾಯವಿಲ್ಲದೆ ನಿರಾತಂಕವಾಗಿ ಅವರು ಏರಿದರು.
ಅರಣ್ಯ ಇಲಾಖೆಯ ಸೂಚನೆಯಂತೆ ಸೊಂಟಕ್ಕೆ ಕಟ್ಟಿದ ಬೆಲ್ಟ್ ಹಾಗೂ ಪಕ್ಕದಲ್ಲಿದ್ದ ರೋಪ್‌ಗೆ ಹುಕ್ ಮೂಲಕ ಸಂಪರ್ಕ ಕಲ್ಪಿಸಿ ಸುರಕ್ಷತೆ ದೃಷ್ಟಿಯಿಂದ ಮೇಲೇರಲು ಅವಕಾಶ ನೀಡಲಾಗಿತ್ತು. ಇವರು ಒಂದೊಂದು ಅಡಿ ಮೇಲೇರಿದಂತೆ ಗಡಾಯಿಕಲ್ಲಿನ ಮೇಲ್ಭಾಗದಲ್ಲಿದ್ದ ಅವರ ಸಂಗಡಿಗರು ರೋಪನ್ನು ಬಿಗಿಯುತ್ತ ಹತ್ತಲು ಸಹಾಯ ಆಗುವಂತೆ ವ್ಯವಸ್ಥೆ ಮಾಡುತ್ತಿದ್ದರು.
ಗಡಾಯಿಕಲ್ಲು ಹತ್ತಲು ಎರಡು ತಾಸು ಪಡೆದುಕೊಂಡ ಜ್ಯೋತಿರಾಜ್ ಮಧ್ಯೆ ನಾಲ್ಕು ಕಡೆಗಳಲ್ಲಿ ಕಲ್ಲಿನ ಪೊಟರೆ ಹಾಗೂ ಮರಗಳಲ್ಲಿ ಅರ್ಧ ಗಂಟೆ ಅವಧಿ ವಿಶ್ರಾಂತಿ ಪಡೆದಿರುವುದಾಗಿ ತಿಳಿಸಿದ್ದಾರೆ. ಗಡಾಯಿಕಲ್ಲು ಹತ್ತಿದ ಬಳಿಕ ಅರ್ಧ ತಾಸು ವಿಶ್ರಾಂತಿ ಪಡೆದು ಮಾಮೂಲು ಮೆಟ್ಟಿಲಿನ ಮೂಲಕ ಕೆಳಗಿಳಿದು ಬಂದರು.
ಕೋತಿರಾಜ್ ಅವರ ಸಾಹಸವನ್ನು ವೀಕ್ಷಿಸಲು ಚಂದ್ಕೂರು ದೇವಸ್ಥಾನದ ಸುತ್ತಮುತ್ತ ನೂರಾರು ಮಂದಿ ಸೇರಿದ್ದರು. ವನ್ಯಜೀವಿ ವಿಭಾಗವು ಜ್ಯೋತಿರಾಜ್ ಮತ್ತು ಅವರ ತಂಡಕ್ಕೆ ಮಾತ್ರ ಅರಣ್ಯ ಭಾಗದ ಮೂಲಕ ಗಡಾಯಿಕಲ್ಲಿನ ಬುಡಭಾಗಕ್ಕೆ ಹೋಗಲು ಅನುಮತಿ ನೀಡಿದ ಕಾರಣ, ವೀಕ್ಷಣೆಗೆ ಬಂದವರು ಚಂದ್ಕೂರು ದೇವಸ್ಥಾನದ ಪರಿಸರದಿಂದಲೇ ವೀಕ್ಷಣೆ ನಡೆಸಬೇಕಾಯಿತು.