ಸಮಗ್ರ ನ್ಯೂಸ್: ಇಂದಿನಿಂದ ಫೆಬ್ರವರಿ 24ರವರೆಗೆ ಅಧಿವೇಶನ ನಡೆಯಲಿದ್ದು, ರಾಜ್ಯಪಾಲರ ಭಾಷಣದ ಮೇಲೆ ಸೋಮವಾರದಿಂದ ಚರ್ಚೆಗಳು ನಡೆಯಲಿವೆ. ಫೆಬ್ರವರಿ 17ರಂದು ಬಜೆಟ್ ಮಂಡನೆಯಾಗಲಿದ್ದು, ಇದೇ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ.
ರಾಜ್ಯದಲ್ಲಿ ಬಜೆಟ್ ಅಧಿವೇಶನ ಶುರುವಾಗಲಿದೆ. ಈ ಹಿನ್ನೆಲೆ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ,ಎಲ್ಲರೂ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇದು ಈ ವಿಧಾನಸಭೆಯ 15ನೆಯ ಮತ್ತು ಕೊನೆಯ ಅಧಿವೇಶನ ಆಗಿರುತ್ತದೆ. ಈಗಿನ ಶಾಸಕರು ಐದು ವರ್ಷ ಅವಧಿಯನ್ನು ಯಶಸ್ವಿಯಾಗಿ ಮುಗಿಸಿದ್ದೀರಿ. ಕೊನೆಯ ಅಧಿವೇಶನ ಎಂದು ಯಾರೂ ನಿರ್ಲಕ್ಷಿಸದೇ ಪಾಲ್ಗೊಳ್ಳಿ ಎಂದು ಸ್ಪೀಕರ್ ಕಾಗೇರಿ ಅವರು ಕೇಳಿಕೊಂಡರು.
ಬೆಳಗಾವಿಯಲ್ಲಿ ಕಳೆದ ಅಧಿವೇಶನ ನಡೆದಿತ್ತು. ಅದಾದ ಬಳಿಕ ಈಗ ವಿಧಾನಸೌಧದಲ್ಲಿ ಸೇರುತ್ತಿದ್ದೇವೆ. ಪ್ರಜಾಪ್ರಭುತ್ವದ ದೇಗುಲ ಎಂದು ಕರೆಯಲಾಗುವ ಸದನ ಇದು. ಸದಸ್ಯರು ಜವಾಬ್ದಾರಿಯುತವಾಗಿ ನಡೆದುಕೊಂಡು ಅಧಿವೇಶದಲ್ಲಿ ಪಾಲ್ಗೊಳ್ಳಬೇಕೆಂದು ಬಯಸುವುದಾಗಿ ಹೇಳಿದರು. ಫೆಬ್ರುವರಿ 10ರಂದು ಆರಂಭವಾಗುವ ಅಧಿವೇಶನ ಫೆ. 24ರವರೆಗೆ ನಡೆಯಲಿದೆ. ಇದು ಬಜೆಟ್ ಅಧಿವೇಶನವಾಗಿದ್ದು ಫೆಬ್ರುವರಿ 17ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡಿಸಲಿದ್ದಾರೆ. ಫೆಬ್ರುವರಿ 20ರಿಂದ 24ರವರೆಗೂ ಬಜೆಟ್ ಮೇಲೆ ಚರ್ಚೆ ನಡೆಯಲಿದೆ.