ಸಮಗ್ರ ನ್ಯೂಸ್: ಸುಳ್ಯದ ಪುರಭವನದಲ್ಲಿ ನಡೆಯಬೇಕಾಗಿದ್ದ ಮದುವೆಯೊಂದು ವರ ಬಾರದ ಕಾರಣ ರದ್ದುಗೊಂಡ ಘಟನೆ ವರದಿಯಾಗಿದ್ದು , ವರನ ಮೊದಲ ಪತ್ನಿ ಗಂಡನ ಮೇಲೆ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ದೂರು ನೀಡಿರುವ ಘಟನೆ ನಡೆದಿದೆ.
ಸುಳ್ಯದ ಉಬರಡ್ಕ ಗ್ರಾಮದ ಯುವತಿಗೆ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಯುವಕನೊಂದಿಗೆ ಮದುವೆ ನಿಗದಿಯಾಗಿತ್ತು. ಫೆ.9ರಂದು ಕೆ.ವಿ.ಜಿ. ಪುರಭವನದಲ್ಲಿ ಮದುವೆ ನಡೆಯಬೇಕಾಗಿತ್ತು. ಮದುಮಗನ ಕಡೆಯ ಬಂದುಮಿತ್ರರು ಆಗಮಿಸಿದ್ದು ಟೌನ್‌ಹಾಲ್ ಅಲಂಕಾರವೂ ನಡೆದಿತ್ತು. ಫೆ.8ರಂದು ವಧುವಿನ ಮನೆಯಲ್ಲಿ ಡಿ.ಜೆ. ಅಳವಡಿಸಿ ಮದುವೆ ಸಂಭ್ರಮ ಕಳೆಗಟ್ಟಿತ್ತು. ವಧುವಿನ ಕಡೆಯವರು ಮದುವೆಗಾಗಿ ಹಾಲ್ ಗೆ ಆಗಮಿಸಿ ಮದುವೆ ಸಿದ್ಧತೆ ನಡೆಸುತ್ತಿದ್ದರು. 500 ಮಂದಿಗೆ ಭೋಜನದ ವ್ಯವಸ್ಥೆ ಕೂಡ ಮಾಡಲಾಗಿತ್ತು.
ಇದ್ದಕ್ಕಿದ್ದಂತೆ ವರ ಕಾಣುತ್ತಿಲ್ಲ ಎಂದು ಮಾಹಿತಿ ಬಂದಿದ್ದು ಮದುಮಗನ ಫೋನ್ ನಂಬರಿಗೆ ಕರೆ ಮಾಡಿದಾಗ ಸ್ವಿಚ್‌ಆಫ್ ಆಗಿತ್ತು. ಹೀಗಾಗಿ ವಧುವಿನ ಕಡೆಯವರು ಕಂಗಾಲಾಗಿದ್ದರು. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಈ ಬೆಳವಣಿಗೆಯಿಂದ ವರನಿಗೆ ಈ ಹಿಂದೆ ಒಂದು ಮದುವೆಯಾಗಿದ್ದು, ಆತನ ಹೆಂಡತಿ ಗಂಡನ ವಿರುದ್ಧ ಬೆಳ್ಳಾರೆ ಪೋಲೀಸ್ ಠಾಣೆಗೆ ದೂರು ಕೊಡಲು ಹೋಗಿದ್ದಾಳೆ ಎಂಬ ಅಚ್ಚರಿಯ ಮಾಹಿತಿ ಹೊರ ಬಿದ್ದಿದೆ. ಮಾಹಿತಿ ತಿಳಿಯುತ್ತಿದ್ದಂತೆ ವಧುವಿನ ಕಡೆಯವರು ಸಭಾಂಗಣದಿಂದ ತೆರಳಿದ್ದು ಮದುವೆ ರದ್ದುಗೊಂಡಿದೆ. ಸಿದ್ಧಗೊಂಡಿದ್ದ ಊಟವನ್ನು ಸಮೀಪದ ಹಾಸ್ಟೆಲ್‌ಗಳಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.