ಸಮಗ್ರ ನ್ಯೂಸ್: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿರುವ ಆರೋಪ ಕೇಳಿ ಬಂದಿದ್ದು, ಈ ಬೆಳವಣಿಗೆಯ ನಡುವೆಯೇ ಗೋಕರ್ಣದ ಮಹಾಬಲೇಶ್ವರ ದೇವಾಲಯಕ್ಕೆ ಬಂದ ಕುಮಾರಸ್ವಾಮಿ ಅವರನ್ನು ಅರ್ಚಕರು ಸ್ಪಷ್ಟನೆ ಕೇಳಿದ ಘಟನೆ ನಡೆದಿದೆ.
ಪಂಚರತ್ನ ಯಾತ್ರೆ ಹಿನ್ನೆಲೆಯಲ್ಲಿ ಕುಮಟಾಗೆ ಆಗಮಿಸಿದ್ದು, ಕುಮಾರಸ್ವಾಮಿ ಗೋಕರ್ಣ ಮಹಾಬಲೇಶ್ವರ ದೇಸವಸ್ಥಾನಕ್ಕೆ ಭೇಟಿ ನೀಡಿದ ವೇಳೆ ದೇವಸ್ಥಾನದ ಅರ್ಚಕರು, ನಿಮ್ಮ ಹೇಳಿಕೆಯಿಂದ ಬೇಸರವಾಗಿದ್ದು ನಿಮ್ಮ ಕುಟುಂಬದ ಮೇಲೆ ನಮಗೆ ಅಭಿಮಾನವಿದೆ. ಅದಕ್ಕಾಗಿ ನೀವು ಇಲ್ಲೇ ಸ್ಪಷ್ಟೀಕರಣ ನೀಡಿ ಎಂದು ಕೇಳಿಕೊಂಡರು.

ಅರ್ಚಕರು ಮಾತಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನು ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಬ್ರಾಹ್ಮಣ ಸಮುದಾಯ ಭವನಕ್ಕೆ ಜಾಗ ಕೊಟ್ಟು ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದೇನೆ. ಸರ್ವೇ ಜನಾಃ ಸುಖಿನೋ ಭವಂತು ಎನ್ನುವ ಬ್ರಾಹ್ಮಣರು ನಮಗೆ ಬೇಕು. ಹಿಂದೂ ಧರ್ಮವನ್ನು ನಾವು ರಕ್ಷಣೆ ಮಾಡುತ್ತೇವೆ. ಹಿಂದೂ ಹೆಸರಲ್ಲಿ ಅಧಿಕಾರಕ್ಕೆ ಬಂದು ಏನು ಮಾಡಿದ್ದಾರೆ ಗೊತ್ತಿದೆ. ಬ್ರಾಹ್ಮಣ ಸಮುದಾಯಕ್ಕೆ ಬಿಜೆಪಿ ಏನು ಮಾಡಿದೆ ಹೇಳಿ..? ಎಂದು ಪ್ರಶ್ನೆ ಮಾಡಿದರು. ನಮಗೆ ಸಾವರ್ಕರ್ ಸಂಸ್ಕೃತಿ ಬೇಡ. ಸರ್ವೆ ಜನಃ ಸುಖಿನೋಭವಂತು ಎನ್ನುವ ಬ್ರಾಹ್ಮಣರು ನಮಗೆ ಬೇಕು ಎಂದರು.
ಆತ್ಮಲಿಂಗಕ್ಕೆ ಪ್ರಾರ್ಥನೆ ಸಲ್ಲಿಸಿದ ಕುಮಾರಸ್ವಾಮಿ
ಪಂಚರತ್ನ ಯಾತ್ರೆಗೆ ಕುಮಟಾದ ಗೋಕರ್ಣಕ್ಕೆ ಆಗಮಿಸಿದ ಕುಮಾರಸ್ವಾಮಿ ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ವೇಳೆ ಮಹಾಗಣಪತಿ ತಲೆಯ ಮೇಲಿನಿಂದ ಹೂವು ಬಿದ್ದು ಪ್ರಸಾದವಾಗಿದೆ. ಬಳಿಕ ಕುಮಾರಸ್ವಾಮಿ ಕೈ ಮುಗಿದು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನದಲ್ಲಿರುವ ಆತ್ಮಲಿಂಗಕ್ಕೆ ಅರ್ಚಕರ ತಂಡದ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.