ಸಮಗ್ರ ನ್ಯೂಸ್: ಹಿಂಡನ್‌ಬರ್ಗ್ ರಿಸರ್ಚ್ ವರದಿ ಬಳಿಕ ಪತನಗೊಳ್ಳುತ್ತಾ ಸಾಗಿದ್ದ ಅದಾನಿ ಸಮೂಹದ ಷೇರುಗಳು ಮಂಗಳವಾರದ ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
ಸಾಲವನ್ನು ಅವಧಿಗೆ ಮುನ್ನವೇ ಮರುಪಾವತಿ ಮಾಡುವ ಮೂಲಕ ಹೂಡಿಕೆದಾರರಿಗೆ ಅದಾನಿ ಕಂಪೆನಿಯು ಭರವಸೆ ಕೊಟ್ಟ ಬೆನ್ನಲ್ಲೇ ಮುಂಬಯಿ ಷೇರುಪೇಟೆಯಲ್ಲಿ, ಕಂಪೆನಿಯ ಷೇರುಗಳಿಗೆ ಬೇಡಿಕೆ ಕಂಡುಬಂತು.
ಮಂಗಳವಾರದ ವಹಿವಾಟಿನ ವೇಳೆ ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಶೇ.14.63ರಷ್ಟು ಏರಿಕೆ ಕಂಡರೆ, ಅದಾನಿ ಪೋರ್ಟ್ಸ್ ಮತ್ತು ಎಪಿಎಸ್‌ಇಝೆಡ್ ಷೇರುಗಳ ಮೌಲ್ಯ ಶೇ.1.33ರಷ್ಟು ಹೆಚ್ಚಳವಾಯಿತು. ಅದಾನಿ ವಿಲ್ಮರ್ ಶೇ.4.99, ಎಸಿಸಿ ಸಿಮೆಂಟ್ ಶೇ.1.32, ಅಂಬುಜಾ ಸಿಮೆಂಟ್ ಶೇ.1.12ರಷ್ಟು ಏರಿಕೆಯಾಯಿತು. ಆದರೆ ಅದಾನಿ ಗ್ರೀನ್ ಷೇರುಗಳು ಶೇ.5ರಷ್ಟು ಪತನಗೊಂಡವು.
ಅದಾನಿ ಎಂಟರ್‌ಪ್ರೈಸಸ್ ಷೇರು ಶೇ.25ರಷ್ಟು ಏರಿಕೆಯಾಗಿ 1,965.50 ರೂ. ಗರಿಷ್ಠ ಮಟ್ಟ ತಲುಪಿದೆ. ಅದಾನಿ ಪೋರ್ಟ್ಸ್ ಬೆಲೆಯು 9.64% ರಷ್ಟು ಏರಿಕೆಯಾಗಿ 598.70 ರೂ.ಗೆ ತಲುಪಿದೆ. ಅದಾನಿ ಟ್ರಾನ್ಸ್ ಮಿಷನ್ ಮತ್ತು ಅದಾನಿ ವಿಲ್ಮಾರ್ ಇಬ್ಬರೂ ತಮ್ಮ ಅಪ್ಪರ್ ಸರ್ಕ್ಯೂಟ್ ಮಿತಿಯನ್ನು ಕ್ರಮವಾಗಿ 1,324.45 ರೂ.ಮತ್ತು 399.40 ರೂ. ತಲುಪಿದೆ.
ಇದರಿಂದಾಗಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಫೋರ್ಬ್ಸ್ ವಿಶ್ವದ ಶ್ರೀಮಂತರ ಪಟ್ಟಿಗೆ ಮರುಪ್ರವೇಶಿಸಿದ್ದು, 17 ನೇ ಸ್ಥಾನದಲ್ಲಿದ್ದಾರೆ. ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದ ಗೌತಮ್ ಅದಾನಿ ಕಳೆದ ವಾರ ಯಿಂದ ಟಾಪ್ 20 ರೊಳಗೆ ಸ್ಥಾನ ಪಡೆಯಲಿಲ್ಲ.