ಸಮಗ್ರ ನ್ಯೂಸ್: ಟರ್ಕಿಯಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಎರಡು ಗಂಟೆಗಳಲ್ಲಿ ಟರ್ಕಿಯಲ್ಲಿ 7.6 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ. ಆಗ್ನೇಯ ಟರ್ಕಿಯಲ್ಲಿ 14 ದಶಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ, ಇದು ದೊಡ್ಡ ವಿಪತ್ತು ಎಂದು ಹೇಳಲಾಗಿದೆ.
21,103 ಜನರು ಗಾಯಗೊಂಡಿದ್ದಾರೆ, ಸುಮಾರು 6000 ಕಟ್ಟಡಗಳು ಕುಸಿದಿವೆ, 3 ವಿಮಾನ ನಿಲ್ದಾಣಗಳಿಗೆ ಹಾನಿಯಾಗಿದೆ ಎಂದು ಭಾರತದಲ್ಲಿನ ಟರ್ಕಿ ರಾಯಭಾರಿ ತಿಳಿಸಿದ್ದಾರೆ.
ಇನ್ನು ಸಹಾಯಕ್ಕಾಗಿ ನಿನ್ನೆ, ಭಾರತವು ಉಪಕರಣಗಳೊಂದಿಗೆ ರಕ್ಷಣಾ ಮತ್ತು ಶೋಧ ತಂಡಗಳನ್ನು ಹೊತ್ತು ಟರ್ಕಿಗೆ ವಾಹಕಗಳನ್ನು ಕಳುಹಿಸಿತ್ತು. ಅಲ್ಲದೇ, ಎರಡನೇ ವಿಮಾನವು ಟರ್ಕಿಗೆ ಹೋಗಿದೆ ಮತ್ತು ಸಂಜೆಯ ಮೊದಲು ಇಳಿಯುತ್ತದೆ. ತಂಡದಲ್ಲಿ ಪರಿಣತ ಶ್ವಾನದಳ ಹಾಗೂ ಭೂಕಂಪ ತಜ್ಞರು ಒಳಗೊಂಡಿದ್ದಾರೆ. ಇದಕ್ಕಾಗಿ ಭಾರತಕ್ಕೆ ಟರ್ಕಿ ಧನ್ಯವಾದ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವವರು ಭಾರಿ ಸಾಧನಗಳನ್ನು ಬಳಸಿ ಮತ್ತು ಕೆಲವೊಮ್ಮ ಬರಿಗೈನಲ್ಲಿಯೇ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಅವಿರತ ಶ್ರಮ ವಹಿಸುತ್ತಿದ್ದು, ಎಲ್ಲೆಂದರಲ್ಲಿ ಸಂತ್ರಸ್ತರ ಆಕ್ರಂದನಗಳು ಕಿವಿಗಪ್ಪಳಿಸುತ್ತಿವೆ.
ಮಲ್ತಾಯ ಪ್ರಾಂತ್ಯದ 13ನೇ ಶತಮಾನದ ಪ್ರಸಿದ್ಧ ಮಸೀದಿಯು ಭಾಗಶಃ ಕುಸಿದಿದೆ. 14 ಅಂತಸ್ತಿನ 28 ಅಪಾರ್ಟ್‌ಮೆಂಟ್‌ಗಳಿದ್ದ ಕಟ್ಟಡವೂ ಧರೆಗುರುಳಿದೆ. ಸಿರಿಯಾದ ಅಲೆಪ್ಪೊ, ಲಟಕಿಯಾ, ಹಮಾ ಮತ್ತು ಟರ್ಟಸ್ ಪ್ರಾಂತ್ಯಗಳಲ್ಲಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಎರಡು ವಾರ ಶಾಲೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.