ಸಮಗ್ರ ನ್ಯೂಸ್: ಮನೆಯೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಸುಂದರ ಪಾಟಾಜೆ ಮತ್ತು ಸಂಗಡಿಗ ಪರಮೇಶ್ವರ ಎಂಬವರಿಗೆ ಮಹಿಳೆಯರು ಧರ್ಮದೇಟು ನೀಡಿದ ಬಗ್ಗೆ ಪ್ರಕರಣ ಪುತ್ತೂರಿನ ಕೋಡಿಂಬಾಡಿಯ ಕಜೆ ಎಂಬಲ್ಲಿ ನಡೆದಿದೆ ಎನ್ನಲಾಗಿದೆ.

ಕೋಡಿಂಬಾಡಿಯ ಕಜೆ ನಿವಾಸಿಗಳಾದ ಗಿರಿಯಪ್ಷ ಮತ್ತು ಚೋಮ ಎಂಬ ಸಹೋದರರ ಮಧ್ಯೆ ದಶಕಗಳಿಂದ ಜಾಗದ ತಕರಾರು ಇದ್ದು ಇತ್ತೀಚೆಗೆ ಸ್ಥಳೀಯ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಇತರೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಜಾಗದ ತಕರಾರು ಎರಡು ಕುಟುಂಬದ ಸದಸ್ಯರ ಮುಖಾಮುಖಿ ಮಾತುಕತೆಯಲ್ಲಿ ಸರಿಪಡಿಸಲಾಗಿದ್ದು ಈ ಹಿಂದಿನ ಪ್ರಕರಣಗಳು ಕೂಡ ಸುಖಾಂತ್ಯಗೊಂಡಿತ್ತು.
ಆದರೆ, ಫೆಬ್ರವರಿ 06 ರಂದು ಸೋಮವಾರ ದಲಿತ ಸಂಘಟನೆಯ ರಾಜ್ಯಾಧ್ಯಕ್ಷ ಎಂದು ತನ್ನ ಸಂಗಡಿಗ ಪರಮೇಶ್ವರ ಎಂಬವರ ಜತೆಗೆ ಹಿಟಾಚಿ ಯಂತ್ರವನ್ನು ಗೊತ್ತುಪಡಿಸಿ ಗಿರಿಯಪ್ಪ ಎಂಬವರ ಮನೆಗೆ ಅಕ್ರಮ ಪ್ರವೇಶ ಮಾಡಿ ತಾವು ಪುತ್ತೂರು ಉಪವಿಭಾಗಧಿಕಾರಿಗಳ ಅದೇಶದ ಮೇರೆಗೆ ತಮ್ಮ ಮನೆಕಟ್ಟಡ ಕೆಡವಲು ಬಂದಿರುವುದಾಗಿ ಸುಳ್ಳು ಹೇಳಿದ್ದಾರೆ ಎನ್ನಲಾಗಿದೆ.

ಗಿರಿಯಪ್ಪ ಎಂಬವರ ಮನೆಯಲ್ಲಿದ್ದ ಹೆಣ್ಮಕ್ಕಳ ಮೇಲೆ ದೌರ್ಜನ್ಯ ಮಾಡಿ ಅನಾಗರಿಕರಂತೆ ವರ್ತಿಸಿದ್ದರೆನ್ನಲಾಗಿದ್ದು, ಸುಂದರ ಪಾಟಾಜೆ ಮತ್ತು ಪರಮೇಶ್ವರ ಎಂಬುವರಿಗೆ ಮನೆಯಲ್ಲಿದ್ದ ಮಹಿಳೆಯರು ಧರ್ಮದೇಟು ನೀಡಿದ್ದು ಪ್ರಕರಣ ಸ್ಥಳೀಯವಾಗಿ ಗೊತ್ತಾಗುತ್ತಿದ್ದಂತೆ ದಲಿತ ಸುಂದರ ಪಾಟಾಜೆ ಮತ್ತು ಸಂಗಡಿಗರು ಸ್ಥಳದಿಂದ ಓಡಿ ಹೋಗಿದ್ದಾರೆ ತಿಳಿದುಬಂದಿದೆ.
ಈ ಬಗ್ಗೆ ಸುಂದರ ಪಾಟಾಜೆ ಮತ್ತು ಪರಮೇಶ್ವರ ಎಂಬವರ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಗಿರಿಯಪ್ಪ ಮತ್ತು ಅವರ ಮಗಳ ಹೇಳಿಕೆಯ ಆಧಾರದಲ್ಲಿ ಲೈಂಗಿಕ ದೌರ್ಜನ್ಯ, ಜಾತಿನಿಂದನೆ, ಅಕ್ರಮ ಪ್ರವೇಶದ ಬಗ್ಗೆ ಪ್ರಕರಣ ದಾಖಲಾಗಿದೆ.