ಸಮಗ್ರ ನ್ಯೂಸ್: ಸೋಮವಾರ ಟರ್ಕಿ ಮತ್ತು ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ 100ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಅನೇಕರು ಮಲಗಿದ್ದಾಗಲೇ ಕಟ್ಟಡಗಳು ನೆಲಚ್ಚಿದ್ದು ಭೂಮಿ ಸೈಪ್ರಸ್ ಮತ್ತು ಈಜಿಪ್ಟ್ವರೆಗೆ ಕಂಪಿಸಿದೆ.
ಟರ್ಕಿಯಲ್ಲಿನ ತುರ್ತು ಸೇವಾ ಅಧಿಕಾರಿಗಳು ಆರಂಭಿಕ ಸಾವಿನ ಸಂಖ್ಯೆಯನ್ನು 76 ಎಂದು ಹೇಳಿದ್ದು, ಇದು ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ರಾತ್ರಿಯ ದುರಂತ, ಪ್ರಮುಖ ನಗರಗಳಲ್ಲಿ ಅನೇಕ ಕಟ್ಟಡಗಳು ನೆಲಸಮ ಆಗಿವೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಸಿರಿಯಾದ ಸರ್ಕಾರದ ನಿಯಂತ್ರಣ ಇರುವ ಭಾಗಗಳಲ್ಲಿ ಮತ್ತು ಟರ್ಕಿಶ್ ಪರ ಬಣಗಳ ನಿಯಂತ್ರಣ ಇರುವ ಭಾಗಗಳಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ.

ಟರ್ಕಿಯ ಮಾಧ್ಯಮಗಳಲ್ಲಿ ಆಘಾತಕ್ಕೊಳಗಾದ ಜನರು ಉಟ್ಟ ಬಟ್ಟೆಯಲ್ಲೇ ಹಿಮದಲ್ಲಿ ನಿಂತಿದ್ದು, ಹಾನಿಗೊಳಗಾದ ಮನೆಗಳ ಅವಶೇಷಗಳನ್ನು ರಕ್ಷಕ ಪಡೆಗಳನ್ನು ಅಗೆಯುವುದನ್ನು ನೋಡುತ್ತಾ ನಿಂತಿರುವುದನ್ನು ಕಾಣಬಹುದು.

ಸುಮಾರು 17.9 ಕಿಲೋಮೀಟರ್ (11 ಮೈಲುಗಳು) ಆಳದಲ್ಲಿ ಬೆಳಗ್ಗೆ 04:17 ಕ್ಕೆ ಭೂಕಂಪ ಸಂಭವಿಸಿದೆ. ಇದಾದ 15 ನಿಮಿಷಗಳ ನಂತರ 6.7 ತೀವ್ರತೆಯ ನಂತರದ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಏಜೆನ್ಸಿ ತಿಳಿಸಿದೆ. ಟರ್ಕಿಯ ಎಎಫ್‌ಎಡಿ ತುರ್ತು ಸೇವಾ ಕೇಂದ್ರವು ಮೊದಲ ಭೂಕಂಪದ ತೀವ್ರತೆಯನ್ನು 7.4 ಎಂದು ಹೇಳಿದೆ. ಈ ಭೂಕಂಪ ಕನಿಷ್ಠ ಒಂದು ಶತಮಾನದಲ್ಲಿ ಈ ಪ್ರದೇಶ ಕಂಡ ಅತ್ಯಂತ ಶಕ್ತಿಶಾಲಿ ಭೂಕಂಪವಾಗಿದೆ.