ಸಮಗ್ರ ನ್ಯೂಸ್: ತಮಿಳುನಾಡಿನ ಲಾರಿ ಚಾಲಕರ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿರುವ ಶ್ರೀದೇವಿ ಕ್ಯಾಶ್ಯೂ ಫ್ಯಾಕ್ಟರಿ ಎಂಬಲ್ಲಿ ಜ.30ರಂದು ರಾತ್ರಿ ವೇಳೆ ನಡೆದಿರುವ ಬಗ್ಗೆ ವರದಿಯಾಗಿದೆ.
ಲಾರಿಯ ಚಾಲಕ ತಮಿಳುನಾಡಿನ ಮಣಿ (36) ಎಂಬವರು ಕೊಲೆಯಾಗಿದ್ದು, ಕೊಲೆ ಆರೋಪಿ ಇನ್ನೋರ್ವ ಲಾರಿ ಚಾಲಕ ವೀರಬಾಹು ಎಂದು ಗುರುತಿಸಲಾಗಿದೆ.
ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿರುವ ಶ್ರೀದೇವಿ ಕ್ಯಾಶ್ಯೂ ಫ್ಯಾಕ್ಟರಿಗೆ ಪ್ರತಿವರ್ಷ ತಮಿಳುನಾಡಿನಿಂದ ಗೇರು ಬೀಜ ಲೋಡ್ ಬರುತ್ತಿದ್ದು ಅದರಲ್ಲಿ ಬಂದವರು ಲಾರಿಯಲ್ಲಿ ಅನ್ಲೋಡ್ ಮಾಡಿ ಹೋಗುತ್ತಿದ್ದರು. ಜ.30ರಂದು ಸಂಜೆ ಗೇರುಬೀಜದ ತುಂಬಿದ್ದ ಲಾರಿಗಳು ಬಂದಿದ್ದು, ಅದರಲ್ಲಿ ಎರಡು ಲಾರಿಗಳು ತಡವಾಗಿ ಬಂದಿರುವುದರಿಂದ ಲಾರಿಯಲ್ಲಿನ ಗೇರುಬೀಜ ಅನ್ಲೋಡ್ ಆಗದೇ ಲಾರಿ ಫ್ಯಾಕ್ಟರಿಯ ಬಳಿ ನಿಂತುಕೊಂಡಿತ್ತು. ಈ ಲಾರಿಗಳ ಚಾಲಕ ಹಾಗೂ ಬದಲಿ ಚಾಲಕರುಗಳು ಕೂಡಾ ಅಲ್ಲಿಯೇ ಉಳಿದುಕೊಂಡಿದ್ದರು ಎನ್ನಲಾಗಿದೆ.
ರಾತ್ರಿ 8:30ರ ಸುಮಾರಿಗೆ ವೀರಬಾಹು ಹಾಗೂ ಮಣಿ ಗಲಾಟೆ ಮಾಡಿಕೊಳ್ಳುತ್ತಿದ್ದು ಈ ವೇಳೆ ವೀರಬಾಹು, ಮಣಿಯ ಕುತ್ತಿಗೆಗೆ ಶಾಲ್ ನಿಂದ ಬಿಗಿದು ಆಯುಧದಿಂದ ಇರಿದು ಗಾಯಗೊಳಿಸಿ ಕೊಲೆ ಮಾಡಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.