ಸಮಗ್ರ ನ್ಯೂಸ್: ಮಹಾತ್ಮ ಗಾಂಧಿಯವರ ಪುಣ್ಯತಿಥಿ ಹಾಗೂ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಸಮಾರೋಪ ಹಿನ್ನೆಲೆಯಲ್ಲಿ ಇಲ್ಲಿನ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಮತ್ತು ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ ಸೋಮವಾರ ಮುಂಜಾನೆ ನೆರವೇರಿತು.
ಇದೇ ಸಂದರ್ಭದಲ್ಲಿ ಇತ್ತೀಚಿಗೆ ಯಕ್ಷಗಾನ ರಂಗಸ್ಥಳದಲ್ಲಿ ನಿಧಾನರಾದ ಖ್ಯಾತ ಯಕ್ಷಗಾನ ಕಲಾವಿದ ಗುರುವಪ್ಪ ಬಾಯಾರ್ ಹಾಗೂ ಕಾವೂರಿನಲ್ಲಿ ಬೆಂಕಿ ಆಕಸ್ಮಿಕದಿಂದ ಮನೆ ಕಳೆದುಕೊಂಡ ಇಂದಿರಾ ಅವರ ಕುಟುಂಬಕ್ಕೆ ಮಾಜಿ ಶಾಸಕ ಬಿ.ಎ. ಮೊಯಿದೀನ್ ಬಾವಾ ಅವರು ನೆರವಿನ ಚೆಕ್ ಹಸ್ತಾಂತರಿಸಿದರು.
ಗುರುವಪ್ಪ ಬಾಯಾರು ಕುಟುಂಬ ಸದಸ್ಯರಿಗೆ ಸಾಂತ್ವನ ನೀಡಿದ ಬಾವಾ 50,000 ರೂ. ನೆರವಿನ ಚೆಕ್ ನೀಡಿದರು. ಬಳಿಕ ಕಾವೂರಿನ ಇಂದಿರಾ ಕುಟುಂಬವನ್ನು ಭೇಟಿ ಮಾಡಿ 25,000 ರು. ಚೆಕ್ ಹಸ್ತಾಂತರ ಮಾಡಿದರು. ಇದೇ ವೇಳೆ ಮಾತಾಡಿದ ಅವರು, “ಯಾವುದೇ ರಾಜಕೀಯ ಲಾಭಕ್ಕಾಗಿ ಸಹಾಯ ನೀಡುತ್ತಿಲ್ಲ. ಬದಲಿಗೆ ಸಂತ್ರಸ್ತ ಕುಟುಂಬದ ಜೊತೆ ನಾವಿದ್ದೇವೆ ಎಂಬ ಧೈರ್ಯ ತುಂಬಲು ಸಹಾಯಹಸ್ತ ಚಾಚಿದ್ದೇನೆ” ಎಂದರು. “ಇಂದಿರಾ ಅವರ ನೂತನ ಮನೆಯ ಕಾಮಗಾರಿಯನ್ನು ಶಾಸಕ ಭರತ್ ಶೆಟ್ಟಿ ಅವರು ಕೈಗೆತ್ತಿಕೊಂಡಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಬಡಕುಟುಂಬಕ್ಕೆ ಶೀಘ್ರದಲ್ಲಿ ಮನೆ ನಿರ್ಮಾಣವಾಗಿ ಅವರ ನೋವು ದೂರವಾಗಲಿ” ಎಂದರಲ್ಲದೆ ನೂತನ ಮನೆಯ ಗೃಹಪ್ರವೇಶದಂದು ಉಟೋಪಚಾರದ ಸಕಲ ವ್ಯವಸ್ಥೆಯನ್ನೂ ತಾನೇ ಮಾಡುವುದಾಗಿ ಹೇಳಿದರು.
ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಹಮ್ಮದ್ ಸಮೀರ್ ಕಾಟಿಪಳ್ಳ, ಕಾವೂರು ಮಾಜಿ ಕಾರ್ಪೋರೇಟರ್ ದೀಪಕ್, ಕಾಂಗ್ರೆಸ್ ಮುಖಂಡರಾದ ಬಶೀರ್ ಬೈಕಂಪಾಡಿ, ಪುರುಷೋತ್ತಮ್ ಚಿತ್ರಾಪುರ, ತಾರಾನಾಥ್ ಬಿ.ಕೆ., ಆನಂದ ಅಮೀನ್, ಮಲ್ಲಿಕಾರ್ಜುನ್ ಕೋಡಿಕಲ್, ಸುರೇಶ್, ಚಂದ್ರಹಾಸ ಪೂಜಾರಿ ಕೋಡಿಕಲ್, ಹಂಝ, ಮಹಿಳಾ ಘಟಕದ ಶಶಿಕಲ ಪದ್ಮನಾಭ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
“ಶರಣ್ ಪಂಪ್ ವೆಲ್ ವಿರುದ್ಧ ಕಠಿಣ ಕ್ರಮ ಅಗತ್ಯ”
“ಹಿಂದೂ ಸಂಘಟನೆಯೊಂದರ ಮುಂದೆ ಎನಿಸಿಕೊಂಡಿರುವ ಶರಣ್ ಪಂಪ್ ವೆಲ್ ಬಹಿರಂಗವಾಗಿ ನೀಡಿರುವ ಹಿಂಸೆಯ ವಾತಾವರಣ ಸೃಷ್ಟಿಸುವ ಹೇಳಿಕೆಯು ಸಮಾಜಕ್ಕೆ ಕಂಟಕವಾಗಿದೆ.
ಚುನಾವಣೆ ಸಂದರ್ಭ ಹೇಳಿರುವ ಈ ಮಾತು ಮತ್ತೊಮ್ಮೆ ಅಶಾಂತಿಯ ಮುನ್ಸೂಚನೆ ನೀಡಿದೆ. ಆತನ ಮೇಲೆ ಪೊಲೀಸ್ ಇಲಾಖೆ ಸುಮೋಟೋ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಭಾಷಣಗಳಿಗೆ ಅಂಕುಶ ಹಾಕದೇ ಹೋದರೆ ದೇಶದಲ್ಲಿ, ಮುಂದಿನ ದಿನಗಳಲ್ಲಿ ಭಾವೈಕ್ಯತೆ, ಸೌಹಾರ್ದತೆಯ ಪದಗಳು ಅರ್ಥ ಕಳೆದುಕೊಳ್ಳಲಿದೆ”