ಸಮಗ್ರ ನ್ಯೂಸ್: ತುಮಕೂರಿನಲ್ಲಿ ನಡೆದ ಶೌರ್ಯ ಯಾತ್ರೆ ಕಾರ್ಯಕ್ರಮದಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆಗೆ ಪ್ರತೀಕಾರವಾಗಿ ಹಿಂದುತ್ವ ಸಂಘಟನೆಯ ಕಾರ್ಯಕರ್ತರೇ ಫಾಝಿಲ್‌ನನ್ನು ಕೊಲೆ ಮಾಡಿರುವುದಾಗಿ ಬಹಿರಂಗ ಹೇಳಿಕೆ ನೀಡಿರುವ ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್ ಹೇಳಿಕೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಜೆಡಿಎಸ್ ದ.ಕ.ಜಿಲ್ಲಾ ಕಾರ್ಯಾಧ್ಯಕ್ಷ ನಝೀರ್ ಉಳ್ಳಾಲ್ ಒತ್ತಾಯಿಸಿದ್ದಾರೆ.
ರಾಜ್ಯ ಬಿಜೆಪಿ ಸರಕಾರವು ಹಿಂದುತ್ವವಾದಿ ಸಂಘಟನೆಗೆ ಬೆಂಬಲ ನೀಡುತ್ತಿರುವುದರಿಂದ ಪೊಲೀಸ್ ಇಲಾಖೆಯ ತನಿಖೆಯಲ್ಲಿ ನಿಷ್ಪಕ್ಷಪಾತ ಕಾಣಿಸದು. ಸರಕಾರಿ ಅಧೀನದ ತನಿಖಾ ಸಂಸ್ಥೆಗಳಿಂದ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ನ್ಯಾಯಾಂಗ ತನಿಖೆಯ ಅಗತ್ಯವಿದೆ. ಹಿಂದೂ ಮತ್ತು ಮುಸ್ಲಿಮರ ಮಧ್ಯೆ ವೈಷಮ್ಯದ ವಿಷ ಬೀಜ ಬಿತ್ತುವ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ನಝೀರ್ ಉಳ್ಳಾಲ್ ಆಗ್ರಹಿಸಿದ್ದಾರೆ.
ಉಳ್ಳಾಲದಲ್ಲಿ ನಡೆದ ಶೌರ್ಯ ಯಾತ್ರೆಯಲ್ಲಿ ಮಾತನಾಡಿದ್ದ ಶರಣ್ ಪಂಪ್ ವೆಲ್ ಅವರು, ಅಗತ್ಯ ಬಿದ್ದರೆ ಭಜರಂಗದಳ ಹೋರಾಟ ಮಾಡುತ್ತದೆ, ಕೆಲವೊಮ್ಮೆ ನಾವು ನುಗ್ಗಿ ಹೊಡೆಯುತ್ತೇವೆ. ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಹಿಂದೂ ಸಮಾಜ ಕಣ್ಣೀರಲ್ಲಿ ಮುಳುಗಿತ್ತು. ಇಡೀ ಜಿಲ್ಲೆ ಒಬ್ಬ ಉತ್ತಮ ಕಾರ್ಯಕರ್ತನ ಬಲಿದಾನಕ್ಕೆ ಬೇಸರ ಪಟ್ಟಿತ್ತು. ಆಗ ನಮ್ಮ ಕಾರ್ಯಕರ್ತರು ಅವನ ಬಲಿದಾನ ನೋಡಿ ಸುಮ್ಮನೆ ಕೂರಲಿಲ್ಲ. ಸುರತ್ಕಲ್ಗೆ ಹೋಗಿ ನುಗ್ಗಿ ನುಗ್ಗಿ ಹೊಡೆದರು. ಅದು ನಮ್ಮ ಶೌರ್ಯ. ಸುರತ್ಕಲ್ನಲ್ಲಿ ಹೊಡೆದ ವಿಡಿಯೋವನ್ನು ಎಲ್ಲರೂ ವಿಡಿಯೋದಲ್ಲಿ ನೋಡಿದ್ದೀರಾ ಎಂದು ಹೇಳಿದ್ದರು.