ಸಮಗ್ರ ನ್ಯೂಸ್: ಗರ್ಭಾವಸ್ಥೆಯ ದಿನಗಳಲ್ಲಿ ಕೆಲವರಿಗೆ ಮೂತ್ರ ಸೋಂಕಿನ ಸಮಸ್ಯೆ ಕಂಡು ಬರುವುದು, ಮೂತ್ರ ವಿಸರ್ಜನೆಗೆ ಹೋಗುವಾಗ ತುಂಬಾ ಉರಿ ಉರಿ ಅನಿಸುವುದು, ಗರ್ಭಾವಸ್ಥೆಯಲ್ಲಿ ಬ್ಯಾಕ್ಟಿರಿಯಾ ಸೋಂಕು ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ ಅವುಗಳನ್ನು ಚಿಕಿತ್ಸೆ ಮಾಡದೆ ಹಾಗೇ ಬಿಟ್ಟರೆ ತುಂಬಾ ತೊಂದರೆಗಳು ಉಂಟಾಗುವುದು. ಇದೊಂದು ಸಾಮಾನ್ಯ ಸೋಂಕಾಗಿದ್ದು ಗುಣಪಡಿಸಬಹುದು.
ಗರ್ಭಾವಸ್ಥೆಯಲ್ಲಿ ಮೂತ್ರ ಸೋಂಕು ಸಹಜವೇ?
ಇಬ್ಬರು ಗರ್ಭಿಣಿಯರಲ್ಲಿ ಒಬ್ಬರಿಗೆ ಮೂತ್ರ ಸೋಂಕಿನ ಸಮಸ್ಯೆ ಕಂಡು ಬರುವುದು. ಗರ್ಭಾವಸ್ಥೆಯಲ್ಲಿ ಒಮ್ಮೆಯಾದರೂ ಮೂತ್ರ ಸೋಂಕು ಕಂಡು ಬರುವುದು. ಅದಲ್ಲದೆ ಗರ್ಭಿಣಿಯರಲ್ಲಿ ಕಿಡ್ನಿ ಸೋಂಕು ಉಂಟಾಗುವ ಸಾಧ್ಯತೆ ಕೂಡ ಇದೆ, ಆದರೆ ಈ ರೀತಿಯಾಗುವುದು ತುಂಬಾ ಅಪರೂಪ. ಶೇ.2ರಷ್ಟು ಗರ್ಭಿಣಿಯರಲ್ಲಿ ಈ ಬಗೆಯ ಸಮಸ್ಯೆ ಕಂಡು ಬರುವುದು. ಈ ರೀತಿಯಾದಾಗ ಚಳಿ ಜ್ವರ, ವಾಂತಿ ಈ ಬಗೆಯ ಲಕ್ಷಣಗಳು ಕಂಡು ಬರುವುದು.
ಗರ್ಭವಸ್ಥೆಯಲ್ಲಿ ಮೂತ್ರ ಸೋಂಕು ಉಂಟಾದಾಗ ಕಂಡು ಬರುವ ಲಕ್ಷಣಗಳೇನು:
- ಮೂತ್ರ ವಿಸರ್ಜನೆಗೆ ಹೋದಾಗ ಉರಿ ಅನುಭವ
- ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು
- ಮೂತ್ರ ನಿಯಂತ್ರಿಸಲು ಸಾಧ್ಯವಾಗದೇ ಇರುವುದು, ಮೂತ್ರ ವಿಸರ್ಜನೆಗೆ ಹೋಗುವ ಮೊದಲೇ ಸ್ವಲ್ಪ ಮೂತ್ರ ಹೋಗುವುದು
- ಮೂತ್ರ ವಿಸರ್ಜನೆಗೆ ಹೋಗುವಾಗ ಕೆಟ್ಟ ವಾಸನೆ
- ಸೊಂಟ ನೋವು (ಹೊಟ್ಟೆ ಹಾಗೂ ಸೊಂಟ ನೋವಿದ್ದರೆ ಕಿಡ್ನಿ ಸೋಂಕು ಇರಬಹುದೇ ಕೂಡಲೇ ಚಿಕಿತ್ಸೆ ಪಡೆಯಿರಿ)
- ಚಳಿ ಜ್ವರ, ಸುಸ್ತು, ವಾಂತಿ
ಗರ್ಭಾವಸ್ಥೆಯಲ್ಲಿ ಮೂತ್ರ ಸೋಂಕಿಗೆ ಕಾರಣವೇನು?
*ದೇಹದಲ್ಲಾಗುವ ಬದಲಾವಣೆ: ಮಹಿಳೆಯರಲ್ಲಿ ಮೂತ್ರ ಸೋಂಕಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ, ಅದರಲ್ಲೂ ಗರ್ಭಿಣಿಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಗರ್ಭಿಣಿಯರಲ್ಲಿ ಹಾರ್ಮೋನ್‌ಗಳಲ್ಲಿ ಬದಲಾವಣೆಯಾಗುತ್ತದೆ, ಅಲ್ಲದೆ ಭ್ರೂಣ ಬೆಳೆಯುತ್ತಿದ್ದಂತೆ ಬ್ಲೇಡರ್ ಮೇಲೆ ಹೆಚ್ಚಿನ ಒತ್ತಡ ಹಾಕುತ್ತದೆ, ಹೀಗಾಗಿ ಮೂತ್ರ ಸಂಪೂರ್ಣ ವಿಸರ್ಜನೆಯಾಗುವುದಿಲ್ಲ, ಹೀಗಾಗಿ ಮೂತ್ರ ಸೋಂಕು ಉಂಟಾಗುವುದು.
*ಬ್ಯಾಕ್ಟಿರಿಯಾ: ಬ್ಯಾಕ್ಟಿರಿಯಾ ಹಲವು ಕಡೆಯಿಂದ ತಗುಲಬಹುದು. ಸಾರ್ವಜನಿಕ ಟಾಯ್ಲೆಟ್ ಬಳಸಿದಾಗ ಬರುವ ಸಾಧ್ಯತೆ ಹೆಚ್ಚು. ಹೊರಗಡೆ ಹೋಗಿ ಮೂತ್ರ ವಿಸರ್ಜನೆ ಮಾಡುವಾಗ ಕಮೋಡ್ ಅನ್ನು ಟಿಶ್ಯೂವಿನಿಂದ ಚೆನ್ನಾಗಿ ಒರೆಸಿದ ಬಳಿಕವಷ್ಟೇ ಕೂರಿ.
*ಲೈಂಗಿಕ ಕ್ರಿಯೆ: ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಮೂತ್ರ ಸೊಂಕು ಉಂಟಾಗಬಹುದು. ಲೈಂಗಿಕ ಕ್ರಿಯೆಗೆ ಮುನ್ನ ಗಂಡನ ಬಳಿ ಅವರ ಗುಪ್ತಾಂಗವನ್ನು ಸ್ವಚ್ಛ ಮಾಡುವಂತೆ ಸೂಚಿಸಿ, ಲೈಂಗಿಕ ಕ್ರಿಯೆ ಬಳಿಕ ಮೂತ್ರ ವಿಸರ್ಜನೆ ಮಾಡಿ. ಹೀಗೆ ಮಾಡುವುದರಿಂದ ಲೈಂಗಿಕ ಸೋಂಕು ತಡೆಗಟ್ಟಬಹುದು.
ಗರ್ಭಾವಸ್ಥೆಯಲ್ಲಿ ಮೂತ್ರ ಸೋಂಕು ತಡೆಗಟ್ಟುವುದು ಹೇಗೆ?
*ಸಾಕಷ್ಟು ನೀರು ಕುಡಿಯಿರಿ: ಗರ್ಭಾವಸ್ಥೆಯಲ್ಲಿ ಸಾಕಷ್ಟು ನೀರು ಕುಡಿಯಿರಿ. ನಿಮ್ಮ ಮೂತ್ರದ ಬಣ್ಣ ನೋಡಿ ನೀವು ಸಾಕಷ್ಟು ನೀರು ಕುಡಿಯುತ್ತಿದ್ದೀರಾ ಎಂದು ತಿಳಿಯಬಹುದು. ನಿಮ್ಮ ಮೂತ್ರ ಹಳದಿ ಬಣ್ಣದಲ್ಲಿದ್ದರೆ ನೀವು ಸಾಕಷ್ಟು ನೀರು ಕುಡಿಯುತ್ತಿಲ್ಲ ಎಂದರ್ಥ.
*ಮೂತ್ರ ತಡೆ ಹಿಡಿಯಬೇಡಿ
ಮೂತ್ರ ವಿಸರ್ಜನೆಗೆ ಬಂದಾಗ ತಡೆ ಹಿಡಿಯಬೇಡಿ, ಅಲ್ಲದೆ ಮೂತ್ರ ವಿಸರ್ಜನೆಗೆ ಹೋದಾಗ ಸಂಪೂರ್ಣವಾಗಿ ಮೂತ್ರ ವಿಸರ್ಜನೆ ಮಾಡಿ.
- ಕಾಟನ್ ಅಂಡರ್‌ವೇರ್‌ಧರಿಸಿ:
ಈ ಬಗೆಯ ಕಾಟನ್ ಒಳ ಉಡುಪು ತೇವಾಂಶ ಹೀರಿಕೊಳ್ಳುವುದರಿಂದ ಬ್ಯಾಕ್ಟಿರಿಯಾ ತಡೆಗಟ್ಟಲು ಸಹಕಾರಿ. ರಾತ್ರಿ ಮಲಗುವಾಗ ಒಳಉಡುಪು ಧರಿಸದಿದ್ದರೆ ಒಳ್ಳೆಯದು.
ಪ್ರತಿ ಬಾರಿ ಬಾತ್‌ರೂಂಗೆ ಹೋದಾಗ ಯೋನಿ ಭಾಗವನ್ನು ಚೆನ್ನಾಗಿ ಒರೆಸಿ. ಪೌಡರ್, ಪರ್ಪ್ಯೂಮ್, ಸುವಾಸನೆ ಇರುವ ಸೋಪು, ಸ್ಪ್ರೇ, ಟಾಯ್ಲೆಟ್ ಪೇಪರ್ ಇವುಗಳನ್ನು ಬಳಸಲೇಬೇಡಿ.
ಆರೋಗ್ಯಕರ ಆಹಾರ ಸೇವಿಸಿ: ಸಾಕಷ್ಟು ನೀರು ಕುಡಿಯಿರಿ, ಎಳನೀರು ಕುಡಿಯಿರಿ, ಆರೋಗ್ಯಕರ ಆಹಾರ ಸೇವಿಸಿ. ಹೆಚ್ಚು ನೀರು ಕುಡಿಯಿರಿ, ಬರೀ ನೀರು ಕುಡಿಯಲು ಬೇಸರವಾದರೆ ತಾಜಾ ಜ್ಯೂಸ್ (ಸಕ್ಕರೆ ಬಳಸದಿರಿ), ಸೂಪ್ ಇವುಗಳನ್ನು ಕುಡಿಯಿರಿ, ಅಧಿಕ ನೀರಿನಾಂಶವಿರುವ ಹಣ್ಣುಗಳನ್ನು ಸೇವಿಸಿ. ದಿನಾ ಎಳನೀರು ಕುಡಿಯಿರಿ.
ಮೊಸರು. ಚೀಸ್ ಮುಂತಾದ ಪ್ರೊಬಯೋಟಿಕ್ ಆಹಾರ ಸೇವಿಸಿ. ಕ್ರ್ಯಾನ್‌ಬೆರ್ರಿ ಜ್ಯೂಸ್ ಕುಡಿಯಿರಿ. ಮೂತ್ರ ಸೋಂಕು ತಡೆಗಟ್ಟಲು ಕ್ರ್ಯಾನ್‌ಬೆರ್ರಿ ಜ್ಯೂಸ್ ಸಹಕಾರಿ. ವಿಟಮಿನ್ ಸಿ ಇರುವ ಆಹಾರಗಳನ್ನು ಅಧಿಕ ಸೇವಿಸಿ.
(ಇಲ್ಲಿರುವ ಮಾಹಿತಿಗಳನ್ನು ನಿಖರ ಮೂಲಗಳಿಂದ ಸಂಗ್ರಹಿಸಲಾಗಿದೆ. ಅದಾಗ್ಯೂ ಹೆಚ್ಚಿನ ಸಮಸ್ಯೆ ಕಂಡುಬಂದಲ್ಲಿ ತಜ್ಞ ವೈದ್ಯರನ್ನು ಸಂಪರ್ಕಿಸಿ)