ಸಮಗ್ರ ನ್ಯೂಸ್: ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮ ಪಂಚಾಯತ್ ನಲ್ಲಿ ನಡೆದ ಸಾಮಾನ್ಯ ಸಭೆಯನ್ನು ಸ್ವತಃ ಆಡಳಿತ ಪಕ್ಷದ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಸ್ವಾರ್ಥಕ್ಕಾಗಿ ಅಧಿಕಾರಿಗಳ ಮೇಲಿನ ದ್ವೇಷ ಸಾಧನೆಗಾಗಿ ಬಹಿಷ್ಕರಿಸಿದ್ದು ಅಸಂವಿಧಾನಿಕ ನಡೆಯಾಗಿದೆ. ಈ ಸಂಬಂಧ ತಕ್ಷಣ ಗ್ರಾಮಸ್ಥರೊಂದಿಗೆ ಕ್ಷಮೆ ಕೇಳಿ ಮತ್ತೆ ಸಭೆ ನಡೆಸಬೇಕು ತಪ್ಪಿದಲ್ಲಿ ಉನ್ನತ ಅಧಿಕಾರಿಗಳು ಪಂಚಾಯತ್ ಆಡಳಿತ ಸಮಿತಿಯನ್ನು ವಿಸರ್ಜಿಸುವಂತೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಉಪ್ಪಿನಂಗಡಿ ಬ್ಲಾಕ್ ಸಮಿತಿಯು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ಜನ ಸಾಮಾನ್ಯರು ಚುನಾವಣೆಯಲ್ಲಿ ಮತ ನೀಡಿ ಆಯ್ಕೆ ಮಾಡಿರುವ ಜನಪ್ರತಿನಿಧಿಗಳು ಗ್ರಾಮಸ್ಥರ ಕಷ್ಟಗಳಿಗೆ ಸ್ಪಂದಿಸಿ ಕುಂದು ಕೊರತೆಗಳು, ಅಭಿವೃದ್ಧಿಯ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾದ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯನ್ನು ಸ್ವತಃ ಆಡಳಿತ ಪಕ್ಷದ ಸದಸ್ಯರು ಬಹಿಷ್ಕರಿಸಿದ್ದು ಗ್ರಾಮದ ಜನತೆಗೆ ಮಾಡಿದ ಮಹಾ ದ್ರೋಹವಾಗಿರುತ್ತದೆ.
ಜನರು ಗ್ರಾಮ ಮಟ್ಟದಲ್ಲಿ ನಡೆಯಬೇಕಾದ ಕೆಲಸ ಕಾರ್ಯಗಳಿಗೆ ಗ್ರಾಮ ಪಂಚಾಯತಿನ ಸಾಮಾನ್ಯ ಸಭೆಯಲ್ಲಿ ಅನುಮತಿ ದೊರಕುವ ನಿರೀಕ್ಷೆಯಲ್ಲಿರುತ್ತಾರೆ. ಆಡಳಿತ ಪಕ್ಷದ ಸಾಮಾನ್ಯ ಸಭೆಯ ಬಹಿಷ್ಕಾರದಿಂದ ಇಂತಹ ಅರ್ಜಿಗಳು ಮತ್ತೆ ಅನುಮೋದನೆ ಆಗಬೇಕಾದರೆ ಗ್ರಾಮಸ್ಥರು ಇನ್ನೆರಡು ತಿಂಗಳುಗಳು ಕಾಯಬೇಕಾದ ದುಸ್ಥಿತಿಯು ಬಂದೊದಗಿದೆ. ಇಂತಹ ಅಸಂವಿಧಾನಿಕ ನಡೆಯನ್ನು ಅನುಸರಿಸಿರುವ ಆಡಳಿತ ಪಕ್ಷದ ಅಧ್ಯಕ್ಷರು ಹಾಗೂ ಸದಸ್ಯರು ಗ್ರಾಮಸ್ಥರಲ್ಲಿ ಕ್ಷಮೆ ಕೇಳಬೇಕು ಇಲ್ಲದಿದ್ದಲ್ಲಿ ಉನ್ನತ ಅಧಿಕಾರಿಗಳು ಆಡಳಿತ ಸಮಿತಿಯನ್ನು ವಿಸರ್ಜಿಸಿ ಗ್ರಾಮಸ್ಥರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಎಸ್ ಡಿಪಿಐ ಉಪ್ಪಿನಂಗಡಿ ಬ್ಲಾಕ್ ಸಮಿತಿಯು ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದೆ.